ಬೆಂಗಳೂರು.ಆಗಸ್ಟ್: ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅದ್ದೂರಿ ಚಿತ್ರ ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಕುರಿತು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಕುರಿತು ನಟ ಮತ್ತು ನಿರ್ಮಾಪಕ ಬಾಲಾಜಿ ವೀರಾಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ವೀಡಿಯೊ ಸಂದೇಶದ ಮೂಲಕ ಮಾತನಾಡಿರುವ ಅವರು, ಅಭಿಮಾನಿಗಳು ‘ಶಾಂತಿ ಕ್ರಾಂತಿ’ ಚಿತ್ರ ಹಾಗೂ ತಮ್ಮ ಕುಟುಂಬದ ಮೇಲೆ ತೋರಿಸುತ್ತಿರುವ ಅಪಾರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು. ಚಿತ್ರವನ್ನು ಮರುಬಿಡುಗಡೆ ಮಾಡುವ ಆಸೆ ಮತ್ತು ಪ್ರಯತ್ನ ತಮ್ಮಲ್ಲೂ ಇದೆ. ಆದರೆ ಪ್ರಸ್ತುತ ಚಿತ್ರದ ಮೂಲ ‘ನೆಗೆಟಿವ್’ಗಳು ಹಾಳಾಗಿದ್ದು ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಅದನ್ನು ಸರಿಪಡಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದಿದ್ದಾರೆ.
ಚಿತ್ರದ ಮರುಬಡುಗಡೆಗೆ ಬೇಕಾದ ಪರ್ಯಾಯ ‘ಸೋರ್ಸ್’ಗಳನ್ನು ಹುಡುಕುವ ಕೆಲಸ ನಡೆಯುತ್ತಿದೆ. ಒಂದು ವೇಳೆ ಸೋರ್ಸ್ ಸಿಕ್ಕರೂ ಸಹ, ಬಣ್ಣ ಮರುಹೊಂದಾಣಿಕೆ (ಕಲರಿಂಗ್), ಮರು ಧ್ವನಿಮುದ್ರಣ (ರೀ-ರೆಕಾರ್ಡಿಂಗ್), ಸೌಂಡ್ ಎಫೆಕ್ಟ್ಸ್, ಡಿಐ, ಡಾಲ್ಬಿ ಅಥವಾ ಡಿಟಿಎಸ್ ಸೌಂಡ್ ತಂತ್ರಜ್ಞಾನ ಅಳವಡಿಕೆ ಹಾಗೂ ಮರು ಸೆನ್ಸಾರ್ ಪ್ರಕ್ರಿಯೆಗಳಿಗೆ ಕನಿಷ್ಠ ಎಂಟರಿಂದ ಹತ್ತು ತಿಂಗಳು ಅಥವಾ ಒಂದು ವರ್ಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ ಎಂದು ವಿವರಣೆ ನೀಡಿದ್ದಾರೆ.
ಇದೇ ವೇಳೆ, ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ‘ಶಾಂತಿ ಕ್ರಾಂತಿ’ ಚಿತ್ರ ರೀ-ರಿಲೀಸ್ ಆಗಲಿದೆ ಎಂದು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರಿಯಾದ ಮೂಲಗಳು ಸಿಕ್ಕಿ, ಕೆಲಸ ಪ್ರಾರಂಭಿಸುವ ಮುನ್ನವೇ ಅಧಿಕೃತವಾಗಿ ಅಭಿಮಾನಿಗಳಿಗೆ ಮಾಹಿತಿ ನೀಡುವುದಾಗಿ ಬಾಲಾಜಿ ವೀರಾಸ್ವಾಮಿ ತಿಳಿಸಿದ್ದಾರೆ.









