ಬೆಂಗಳೂರು : ದೇಶದ ಕೋಟ್ಯಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ವಾರ್ಷಿಕ ₹5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’ಯ (AB PM-JAY) ಫಲಾನುಭವಿಗಳಿಗೆ ಮಹತ್ವದ ಸೂಚನೆಯೊಂದನ್ನು ನೀಡಲಾಗಿದೆ. ಕಾರ್ಡ್ದಾರರು ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಉಚಿತ ಚಿಕಿತ್ಸಾ ಸೌಲಭ್ಯ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಆಯುಷ್ಮಾನ್ ಕಾರ್ಡ್ನಲ್ಲಿ ಹೆಸರು, ಹುಟ್ಟಿದ ದಿನಾಂಕ, ಭಾವಚಿತ್ರ ಅಥವಾ ಆಧಾರ್ ಮಾಹಿತಿ ಹಳೆಯದಾಗಿದ್ದರೆ ಅಥವಾ ಹೊಂದಾಣಿಕೆಯಾಗದಿದ್ದರೆ ತಕ್ಷಣವೇ ಅಪ್ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಸೇವಾ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲದೆ, ಫಲಾನುಭವಿಗಳು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಸುಲಭವಾಗಿ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಆನ್ಲೈನ್ನಲ್ಲಿ ಇ-ಕೆವೈಸಿ ಪೂರ್ಣಗೊಳಿಸುವ ಸರಳ ಹಂತಗಳು
ನಿಮ್ಮ ಮೊಬೈಲ್ನಲ್ಲಿ ಗೂಗಲ್ ಪ್ಲೇ ಸ್ಟೋರ್ನಿಂದ ಅಧಿಕೃತ ‘Ayushman App’ ಡೌನ್ಲೋಡ್ ಮಾಡಿಕೊಳ್ಳಿ.
ಮುಖದ ಮೂಲಕ ಪರಿಶೀಲನೆ (Face Authentication) ನಡೆಸಲು ಇಚ್ಛಿಸಿದರೆ, ‘Aadhaar FaceRD’ ಆ್ಯಪ್ ಅನ್ನು ಸಹ ಇನ್ಸ್ಟಾಲ್ ಮಾಡಿ.
ಆಯುಷ್ಮಾನ್ ಆ್ಯಪ್ ತೆರೆದು, ‘Beneficiary’ ಆಯ್ಕೆಯನ್ನು ಆರಿಸಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಬರುವ OTP ಬಳಸಿ ಲಾಗಿನ್ ಆಗಿ.
ನಂತರ ನಿಮ್ಮ ರಾಜ್ಯ, ಯೋಜನೆ (Scheme) ಮತ್ತು ಜಿಲ್ಲೆಯನ್ನು ಆಯ್ಕೆಮಾಡಿ.
ನಿಮ್ಮ ಆಧಾರ್ ಸಂಖ್ಯೆ ಅಥವಾ ಪಡಿತರ ಚೀಟಿ (Ration Card) ಸಂಖ್ಯೆಯನ್ನು ನಮೂದಿಸಿ ನಿಮ್ಮ ಕುಟುಂಬದ ವಿವರಗಳನ್ನು ಹುಡುಕಿ.
ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಗುರುತಿಸಿ, ಅದರ ಮುಂಭಾಗದಲ್ಲಿರುವ ‘e-KYC’ ಅಥವಾ ‘Redo e-KYC’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಆಧಾರ್ OTP ಅಥವಾ ಮುಖ ಚಹರೆ (Face Authentication) ಮೂಲಕ ಗುರುತಿನ ದೃಢೀಕರಣವನ್ನು ಪೂರ್ಣಗೊಳಿಸಿ.
ಅಗತ್ಯವಿರುವ ವಿವರಗಳನ್ನು ಪರಿಶೀಲಿಸಿ, ಕೇಳಲಾದ ಹೊಸ ಛಾಯಾಚಿತ್ರವನ್ನು (Live Photo) ತೆಗೆದು ಅಪ್ಲೋಡ್ ಮಾಡಿ, ಸಲ್ಲಿಕೆ (Submit) ಬಟನ್ ಒತ್ತಿ.
ಅರ್ಜಿ ಸಲ್ಲಿಕೆಯಾದ ಬಳಿಕ ಅಧಿಕಾರಿಗಳ ಪರಿಶೀಲನೆ ನಡೆಯಲಿದ್ದು, ಇದಕ್ಕೆ ಸ್ವಲ್ಪ ಸಮಯಾವಕಾಶ ತಗಲಬಹುದು.
ಪರಿಶೀಲನೆ ಯಶಸ್ವಿಯಾಗಿ ಅನುಮೋದನೆಗೊಂಡ ನಂತರ, ನವೀಕರಿಸಿದ ಹೊಸ ಆಯುಷ್ಮಾನ್ ಕಾರ್ಡ್ ಅನ್ನು ಅದೇ ಆ್ಯಪ್ನಿಂದ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.














