ಸುದ್ದಿಒನ್, ಹಿರಿಯೂರು, ಅಕ್ಟೋಬರ್. 15 : ತಾಲ್ಲೂಕಿನ ಅಮ್ಮನಹಟ್ಟಿ ಗ್ರಾಮದ ಬೆಟ್ಟದ ಮೇಲೆ ನೆಲೆಸಿರುವ ಕಾಡುಗೊಲ್ಲ ಸಮುದಾಯದ ಕರಡಿಗೊಲ್ಲರ ಬೆಡಗಿನ ಆರಾಧ್ಯ ದೈವ ಪ್ರಸಿದ್ಧ ಶ್ರೀ ಜೋಡಿ ರಂಗನಾಥಸ್ವಾಮಿಯ ಅಂಬಿನೋತ್ಸವ ಅಕ್ಟೋಬರ್ 21ರಂದು ಭಕ್ತಿಭಾವದಿಂದ ನಡೆಯಲಿದೆ.
ಅ. 20ರಂದು ಮಂಗಳವಾರ ರಾತ್ರಿ 10 ಗಂಟೆಗೆ ಶ್ರೀ ಸ್ವಾಮಿಯ ಗಂಗಾಪೂಜೆ ಮತ್ತು ಆಯುಧ ಪೂಜೆ ಹಾಗೂ ಮಕ್ಕಳ ಫಲದ ಕನ್ನಿಕೆಯರುಗಳು ಮಾಡುವ ಪೂಜೆ ವೇದಾವತಿ ನದಿಯಲ್ಲಿ ನಡೆಯಲಿದೆ. ಅ. 21ರಂದು ಬುಧವಾರ ಬೆಳಗ್ಗೆ 9 ಗಂಟೆಗೆ ಶ್ರೀ ಸ್ವಾಮಿಯು ದೊಡ್ಡಉತ್ಸವದೊಡನೆ ಅಮ್ಮನಹಟ್ಟಿ ಗ್ರಾಮದಿಂದ ಹೊರಟು ಬೆಟ್ಟದ ಮೇಲಿರುವ ಶಿಲಾ ಮೂರ್ತಿ ಹಾಗೂ ಬನ್ನಿ ಮಂಟಪಕ್ಕೆ ತೆರಳಿ ಅಂಬಿನೋತ್ಸವ ಪೂಜೆ ನಡೆಯಲಿದೆ. ಅ. 22ರಂದು ಗುರುವಾರ ಸಂಜೆ 4 ಗಂಟೆಗೆ ಅಣ್ಣ ತಮ್ಮಂದಿರು ಮತ್ತು ಭಕ್ತಾಧಿಗಳಿಂದ 101 ಎಡೆ ಪೂಜೆ, ರಾತ್ರಿ 10 ಕ್ಕೆ ಬೆಟ್ಟದ ಮೇಲಿರುವ ಶ್ರೀ ಸ್ವಾಮಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿ ಮದಾಸೆ, ಭಜನೆ, ಲಂಬಾಣಿ ಹೆಣ್ಣು ಮಕ್ಕಳ ಕೋಲಾಟ, ನಂದಿಕೋಲು, ಡೊಳ್ಳು, ಸಿಡಿಮದ್ದು ಕಾರ್ಯಕ್ರಮಗಳೊಂದಿಗೆ ಅಮ್ಮನಹಟ್ಟಿ ಗ್ರಾಮಕ್ಕೆ ದೇವರು ವಾಪಸ್ ಬರಲಿದೆ. ಅ. 23 ಶುಕ್ರವಾರ ಬೆಳಗ್ಗೆ 10 ಗಂಟೆಗೆ ದೂಳ್ಮಣೇವು ಹಾಗೂ ಶ್ರೀ ರಂಗನಾಥ ಸ್ವಾಮಿಯ ಹೂವಿನ ಹರಾಜಿನೊಂದಿಗೆ ಜಾತ್ರೆ ತೆರೆ ಕಾಣಲಿದೆ. ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ರಂಗಯ್ಯ ಕರಡಿಗೊಲ್ಲರ ಸಂಕೇತ: ಶ್ರೀ ಜೋಡಿ ರಂಗನಾಥಸ್ವಾಮಿಯ ಅಂಬಿನೋತ್ಸವವು ಧಾರ್ಮಿಕ ಶ್ರದ್ಧೆ, ಸಾಂಪ್ರದಾಯಿಕ ಆಚರಣೆ ಹಾಗೂ ಸಮುದಾಯದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ಗಮನ ಸೆಳೆಯುತ್ತಿದೆ. ಕರಡಿಗೊಲ್ಲರ ನಂಬಿಕೆ, ಭಕ್ತಿಯ ಪ್ರತೀಕ ಕಾಡುಗೊಲ್ಲ ಸಮುದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಶ್ರೀ ರಂಗಯ್ಯನು ಕರಡಿಗೊಲ್ಲರ ಬೆಡಗಿನ ಆರಾಧ್ಯ ದೈವವಾಗಿ ಭಕ್ತರ ಆರಾಧನೆಗೆ ಪಾತ್ರವಾಗಿದೆ. ತಲೆಮಾರುಗಳಿಂದ ನಡೆದು ಬಂದಿರುವ ದೈವಭಕ್ತಿ, ಸಂಪ್ರದಾಯ ಮತ್ತು ಆಚರಣೆಗಳೊಂದಿಗೆ ಬೆಸೆದುಕೊಂಡಿರುವ ಈ ದೇವರ ಆರಾಧನೆಯು ಸಮುದಾಯದ ಧಾರ್ಮಿಕ ನಂಬಿಕೆಗಳ ಮಹತ್ವವನ್ನು ಸಾರುತ್ತದೆ. ಅಮ್ಮನಹಟ್ಟಿ ಗ್ರಾಮದ ಶ್ರೀ ರಂಗನಾಥ ದೇವಾಲಯವು ಭಕ್ತರ ಪಾಲಿಗೆ ಶ್ರದ್ಧೆ ಮತ್ತು ನಂಬಿಕೆಯ ಕೇಂದ್ರವಾಗಿದೆ. ದೇವರ ದರ್ಶನ, ಪೂಜೆ ಹಾಗೂ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.
ಅಂಬಿನೋತ್ಸವಕ್ಕೆ ಧಾರ್ಮಿಕ ಮೆರುಗು : ಅಕ್ಟೋಬರ್ 21ರಂದು ನಡೆಯಲಿರುವ ಅಂಬಿನೋತ್ಸವವು ದೇವಾಲಯದ ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖವಾದ ಉತ್ಸವವಾಗಿದೆ. ಇಂತಹ ಉತ್ಸವಗಳು ಕೇವಲ ಪೂಜಾ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಸಂದರ್ಭಗಳಾಗಿವೆ. ದೈವದ ಮೇಲಿನ ಅಚಲ ನಂಬಿಕೆ, ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯಗಳು ಹಾಗೂ ಸಮುದಾಯದ ಒಗ್ಗಟ್ಟನ್ನು ಪ್ರತಿಬಿಂಬಿಸುವ ಅಂಬಿನೋತ್ಸವವು ಭಕ್ತರಲ್ಲಿ ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಸಂಪ್ರದಾಯದ ಸಂಭ್ರಮಕ್ಕೆ ಸಾಕ್ಷಿಯಾಗಲಿರುವ ಅಮ್ಮನಹಟ್ಟಿ ಗ್ರಾಮೀಣ ಧಾರ್ಮಿಕ ಪರಂಪರೆ ಮತ್ತು ಜನಪದ ಸಂಸ್ಕೃತಿಯ ಸೊಗಡನ್ನು ಪ್ರತಿಬಿಂಬಿಸುವ ಶ್ರೀ ಜೋಡಿ ರಂಗನಾಥಸ್ವಾಮಿ ಅಂಬಿನೋತ್ಸವವು ಗ್ರಾಮದ ಧಾರ್ಮಿಕ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯಲಿದೆ. ನಂಬಿಕೆ, ಭಕ್ತಿ ಮತ್ತು ಪರಂಪರೆಯ ಸಂಗಮವಾಗಿರುವ ಈ ಉತ್ಸವವು ಕರಡಿಗೊಲ್ಲ ಸಮುದಾಯದ ಆರಾಧನಾ ಸಂಸ್ಕೃತಿಯ ಮಹತ್ವವನ್ನು ಸಾರಲಿದೆ.
ಹೊಸದುರ್ಗ ತಾಲ್ಲೂಕಿನ ಅಂಚಿಬಾರಿಹಟ್ಟಿ ಗ್ರಾಮದವರಾದ ಈಗಿನ ಅಮ್ಮನಹಟ್ಟಿಯ ಒಂದನೇ ಪಟ್ಟದ ಪೂಜಾರಿ ತಿಮ್ಮಣ್ಣನವರ ಕುಟುಂಬಸ್ಥರ ನಡುವೆ ಪೂಜೆ ವಿಚಾರವಾಗಿ, ಅಣ್ತಮಂದಿರುಗಳ ಮಧ್ಯೆ ವೈಮನಸ್ಸು ಉಂಟಾಗಿ, ಶ್ರೀ ಹಾರನ ಕಣಿವೆಯಿಂದ ಶ್ರೀ ರಂಗನಾಥ ಸ್ವಾಮಿಯ ಮೂಲ ವಿಗ್ರಹವನ್ನು ಸುಮಾರು ನೂರು ವರ್ಷಗಳ ಹಿಂದೆ ಹಿರಿಯೂರು ತಾಲ್ಲೂಕಿನ ಅಮ್ಮನಹಟ್ಟಿಗೆ ತಂದು ಪ್ರತಿಷ್ಠಾಪಿಸಲಾಗುತ್ತದೆ. ಅಂದಿನಿಂದ ಪೂಜಿಸಿಕೊಂಡು, ಅಂಬಿನೋತ್ಸವ ನಡೆಸುತ್ತಾ ಬರುತ್ತಿದ್ದೆವೆ ಎಂದು ಪಟ್ಟದ ಪೂಜಾರಿ ಹಳ್ಳಪ್ಪನವರು ವಿವರಿಸಿದರು.
ದೇವರಿಗೆ ಹುಳುಗಳ ಹರಕೆ: ಮನೆ, ಹೊಲ ಗದ್ದೆಗಳಲ್ಲಿ, ರಾತ್ರಿ ವೇಳೆ ವಿಷ ಜಂತುಗಳು ತಮಗೆ ಕಾಣಿಸಿಕೊಂಡಾಗ ರಂಗನಾಥ ಸನ್ನಿಧಿಗೆ ಬಂದು ಜಾತ್ರೆಯಲ್ಲಿ ಹುಳಗಳನ್ನು ಅರ್ಪಿಸುತ್ತೇವೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಕಟ್ಟಿಕೊಂಡ ಹರಕೆ ತೀರಿಸಲು ತಂದಿದ್ದ ಜರಿ, ಹಾವು, ಚೇಳುಗಳನ್ನು ಭಕ್ತರು ಹುಂಡಿಯಲ್ಲಿ ಹಾಕಿ ಹರಕೆ ತೀರಿಸುವುದು ಜಾತ್ರೆಯ ಮತ್ತೊಂದು ವಿಶೇಷತೆಯಾಗಿದೆ.
ಅಮ್ಮನಹಟ್ಟಿಯ ಶ್ರೀ ಜೋಡಿ ರಂಗನಾಥಸ್ವಾಮಿಯನ್ನು, ಒಂದನೇ ಪಟ್ಟದ ಪೂಜಾರಿ ತಿಮ್ಮಣ್ಣ, ಪೂಜಾರಿ ಹಳ್ಳಪ್ಪ, ತಿಮ್ಮರಾಯ ಪೂಜಾರಿ ಅವರು ಪೂಜಿಸುತ್ತಾ ಬಂದಿದ್ದು, ಇದೊಂದು ವಿಶಿಷ್ಟ ಜಾತ್ರೆಯಾಗಿದೆ. ನಂಬಿ ಬಂದವರನ್ನು ಕೈಬಿಡದ ಸ್ವಾಮಿಯು ಸಾವಿರಾರು ಪ್ರಮಾಣದಲ್ಲಿ ಅಪಾರ ಭಕ್ತರನ್ನು ಹೊಂದಿರುವ ಸ್ವಾಮಿಯ ಅಂಬಿನೋತ್ಸವಕ್ಕೆ ಹಿರಿಯೂರು ಸುತ್ತ ಮುತ್ತ ಸೇರಿದಂತೆ ಚಿತ್ರದುರ್ಗ, ತುಮಕೂರು, ದಾವಣಗೆರೆ, ಬೆಂಗಳೂರು, ಅಲ್ಲದೆ ಹೊರರಾಜ್ಯ ತಮಿಳುನಾಡಿನ ನಾಮಕಲ್, ಆಂದ್ರಪ್ರದೇಶದಿಂದಲೂ ಹೆಚ್ಚಿನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ತನ್ನ ಇಷ್ಟಾರ್ಥಗಳನ್ನು ಪೂರೈಸುತ್ತಾರೆ.
– ರಾಜೇಂದ್ರ, ಕಿರಿಯ ಪೂಜಾರಿ












