ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ದ್ವೈವಾರ್ಷಿಕ ಚುನಾವಣೆ 2026ರ ಮತದಾನವು ಅಕ್ಟೋಬರ್ 23 ರಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ನಡೆಯಲಿದ್ದು, ಮತದಾನದ ವಿಧಾನ ಕುರಿತು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಮತದಾನದ ವಿಧಾನ
ಮತ ಚಲಾಯಿಸುವ ಉದ್ದೇಶಕ್ಕಾಗಿ, ಚುನಾವಣಾಧಿಕಾರಿಯು ಮತ ಪತ್ರದೊಡನೆ ಮತದಾರರಿಗೆ ನೀಡುವ ನೇರಳೆ ಬಣ್ಣದ ಸೈಜ್ ಪೆನ್ನನ್ನು ಮಾತ್ರ ಬಳಸಿ, ಮತ ಚಲಾಯಿಸಬೇಕು. ಬೇರೆ ಯಾವುದೇ ಪೆನ್ನು, ಪೆನ್ಸಿಲ್ಲು, ಬಾಲ್ ಪಾಯಿಂಟ್ ಪೆನ್ನು ಅಥವಾ ಗುರುತು ಮಾಡುವ ಯಾವುದೇ ಇತರ ಸಾಧನವನ್ನು ಬಳಸಿ ಮತ ಚಲಾಯಿಸಿದರೆ, ನಿಮ್ಮ ಮತವನ್ನು ಅಸಿಂಧು ಎಂದು ಪರಿಗಣಿಸಲಾಗುವುದು.
ಮತದಾರರು ನಿಮ್ಮ ಮೊದಲನೇ ಪ್ರಾಶಸ್ತ್ಯವಾಗಿ ನೀವು ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವಿರೋ, ಆ ಅಭ್ಯರ್ಥಿಯ ಹೆಸರಿನ ಮುಂದೆ ಒದಗಿಸಲಾಗಿರುವ, “ಪ್ರಾಶಸ್ತ್ಯಕ್ರಮ” ಎಂದು ಗುರುತು ಮಾಡಲಾಗಿರುವ ಅಂಕಣದಲ್ಲಿ ಅಂಕಿ 7 ನ್ನು ಗುರುತು ಹಾಕುವ ಮೂಲಕ ನಿಮ್ಮ ಮತ ನೀಡಿ. ಈ ಅಂಕಿ 1 ನ್ನು ಒಬ್ಬನೇ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು.
ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಚುನಾಯಿಸಬೇಕಿದ್ದ ಪಕ್ಷದಲ್ಲಿ ಸಹ, ಅಂಕಿ ಇನ್ನು ಕೇವಲ ಒಬ್ಬನೇ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು.
ಚುನಾಯಿಸಬೇಕಾಗಿರುವ ಅಭ್ಯರ್ಥಿಗಳ ಸಂಖ್ಯೆ ಎಷ್ಟೇ ಇದ್ದರೂ, ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆಯಷ್ಟೇ ಪ್ರಾಶಸ್ತ್ಯಗಳನ್ನು ನೀವು ಹೊಂದಿರುತ್ತೀರಿ. ಉದಾಹರಣೆಗೆ: ಚುನಾಯಿಸಬೇಕಾಗಿರುವ ಸ್ಥಾನಕ್ಕೆ, ಐದು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಲ್ಲಿ ನಿಮ್ಮ ಪ್ರಾಶಸ್ತ್ಯದ ಕ್ರಮದಲ್ಲಿ ಐದು ಪ್ರಾಶಸ್ತ್ಯಗಳನ್ನು ಗುರುತು ಹಾಕಬಹುದು.
ಯಾರೇ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಕೇವಲ ಒಂದು ಅಂಕಿಯನ್ನು ಮಾತ್ರ ನೀವು ಗುರುತು ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಅದೇ ಅಂಕಿಯನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳ ಮುಂದೆ ಗುರುತು ಹಾಕಿರುವುದಿಲ್ಲ ಎಂಬುದನ್ನು ಸಹ ಖಚಿತಪಡಿಸಿಕೊಳ್ಳಿ.
ಪ್ರಾಶಸ್ತ್ಯವನ್ನು ಅಂಕಿಗಳ ಮೂಲಕ ಮಾತ್ರ ಎಂದರೆ, 1, 2, 3, ಇತ್ಯಾದಿ ಕ್ರಮದಲ್ಲಿ ಮಾತ್ರ ಗುರತು ಹಾಕಬೇಕು, ಇದರ ಬದಲಾಗಿ ಒಂದು, ಎರಡು, ಮೂರು, ಇತ್ಯಾದಿ ಅಕ್ಷರಗಳ ರೂಪದಲ್ಲಿ ಬರೆಯಬಾರದು.
ಅಂಕಿಗಳನ್ನು ಅಂತರಾಷ್ಟ್ರೀಯ ರೂಪದ ಭಾರತೀಯ ಅಂಕೆಗಳಲ್ಲಿ 1. 2. 3 ಅಥವಾ i, ii, iii, ಇತ್ಯಾದಿ ರೋಮನ್ ಅಂಕಿಗಳ ರೂಪದಲ್ಲಿ ಅಥವಾ ದೇವನಾಗರಿ ಭಾಷೆಯಲ್ಲಿ ಅಥವಾ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಮಾನ್ಯ ಮಾಡಲಾಗಿರುವ ಭಾರತದ ಯಾವುದೇ ಭಾಷೆಯಲ್ಲಿ ಬಳಸಲಾಗುವ ಅಂಕಿಗಳ ರೂಪದಲ್ಲಿ ಗುರುತು ಹಾಕಬಹುದಾಗಿದೆ.
ಮತ ಪತ್ರದ ಮೇಲೆ ನಿಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬೇಡಿ ಮತ್ತು ನಿಮ್ಮ ಸಹಿ ಅಥವಾ ಇನ್ಶಿಯಲ್ಗಳನ್ನು ಹಾಕಬೇಡಿ. ಅಲ್ಲದೇ, ನಿಮ್ಮ ಹೆಬ್ಬೆಟ್ಟಿನ ಗುರುತನ್ನೂ ಸಹ ಹಾಕಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮತಪತ್ರ ಅಸಿಂಧುವಾಗುತ್ತದೆ.
ನಿಮ್ಮ ಪ್ರಾಶಸ್ತ್ಯವನ್ನು ಸೂಚಿಸುವುದಕ್ಕಾಗಿ, ನಿಮ್ಮ ಆಯ್ಕೆಯ ಅಭ್ಯರ್ಥಿಗಳ ಹೆಸರುಗಳ ಮುಂದೆ ಅಂಕಿಯನ್ನಲ್ಲದೇ ಇನ್ನಾವುದೇ ಚಿಹ್ನೆ “ಅಥವಾ ‘X’ ಗುರುತನ್ನು ಹಾಕಬೇಡಿ. ಅಂಥ ಮತಪತ್ರವನ್ನು ತಿರಸ್ಕರಿಸಲಾಗುವುದು. ಆದ್ದರಿಂದ, ನಿಮ್ಮ ಪ್ರಾಶಸ್ತ್ಯಗಳನ್ನು ಈ ಮೇಲೆ ವಿವರಿಸಿರುವಂತೆ 1. 2. 3 ಇತ್ಯಾದಿ ಅಂಕಿಗಳಲ್ಲಿ ಮಾತ್ರ ಸೂಚಿಸಿ.
ನಿಮ್ಮ ಮತಪತ್ರವನ್ನು ಸಿಂಧು ಎಂದು ಪರಿಗಣಿಸುವುದಕ್ಕಾಗಿ ಅಭ್ಯರ್ಥಿಗಳ ಪೈಕಿ ಒಬ್ಬನೇ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಅಂಕಿ “1” ನ್ನು ಗುರುತು ಹಾಕುವ ಮೂಲಕ ನಿಮ್ಮ ಮೊದಲ ಪ್ರಾಶಸ್ತ್ಯವನ್ನು ಸೂಚಿಸುವುದು ಅವಶ್ಯಕವಾಗಿದೆ. ನೀವು ಎರಡನೆಯ ಅಥವಾ ತರುವಾಯದ ‘ಪ್ರಾಶಸ್ತ್ಯಗಳನ್ನು ಸೂಚಿಸಬಹುದಾಗಿದೆ ಅಥವಾ ಸೂಚಿಸದೇ ಇರಬಹುದಾಗಿದೆ.
ಮತಗಟ್ಟೆಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿಯು ಮತಪತ್ರವನ್ನು ಉದ್ದವಾಗಿ ಮಡಚಿ ಮತ್ತು ಅಡ್ಡಲಾಗಿ ಮಡಚಿ ನೀಡುತ್ತಾರೆ. ತಾವು ಮತ ಚಲಾಯಿಸುವಾಗ ಅದನ್ನು ತೆಗೆದು ನಿಮ್ಮ ಆಯ್ಕೆಯ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯದ ಮುಖಾಂತರ ಅಂಕಿಗಳನ್ನು ನಮೂದಿಸಿ. ನಂತರ ಮತಗಟ್ಟೆ ಅಧಿಕಾರಿಯು ನೀಡಿದ ಹಾಗೆಯೇ ಮತ ಪತ್ರವನ್ನು ಮೊಹರು ಮತ್ತು ಸಹಿಯು ಕಾಣುವ ಹಾಗೆ ಮಡಚಿ ಮತ ಪೆಟ್ಟಿಗೆಯಲ್ಲಿ ಹಾಕಬೇಕು.
“ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು”. ಹೆಚ್ಚಿನ ಮಾಹಿತಿಗಾಗಿ ಮತದಾರರು ಉಚಿತ ಸಹಾಯವಾಣಿ ಸಂಖ್ಯೆ 1950 ಅಥವಾ 180042551950 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.














