ಬೆಂಗಳೂರು.ಜುಲೈ.08: ರಾಜ್ಯ ಸರ್ಕಾರಿ ನೌಕರರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ. ನೌಕರರು ತಮ್ಮ ಸಾಮಾನ್ಯ ವೇತನ ಖಾತೆಯನ್ನು ‘ಸಂಬಳ ಪ್ಯಾಕೇಜ್’ ಖಾತೆಯನ್ನಾಗಿ ಪರಿವರ್ತಿಸಿಕೊಳ್ಳುವ ಮೂಲಕ ಉಚಿತ ವೈಯಕ್ತಿಕ ಅಪಘಾತ ವಿಮೆ ಸೇರಿದಂತೆ ಬ್ಯಾಂಕ್ ಗಳು ನೀಡುವ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದ್ದಾರೆ.
ಅನಿರೀಕ್ಷಿತ ದುರ್ಘಟನೆಗಳು ಸಂಭವಿಸಿದಾಗ ನೌಕರರ ಕುಟುಂಬಗಳು ಆರ್ಥಿಕವಾಗಿ ಬೀದಿಗೆ ಬೀಳಬಾರದು ಎಂಬ ಉದ್ದೇಶದಿಂದ ಸರ್ಕಾರವು ಈ ವಿಶೇಷ ಸೌಲಭ್ಯವನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರದ ಅಧಿಕಾರಿಗಳು, ನೌಕರರು ಮಾತ್ರವಲ್ಲದೆ ವಿವಿಧ ನಿಗಮ ಮತ್ತು ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳೂ ಸಹ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ತಮ್ಮ ವೇತನ ಖಾತೆಯನ್ನು ಈ ಪ್ಯಾಕೇಜ್ ಖಾತೆಗೆ ಬದಲಾಯಿಸಿಕೊಳ್ಳಬಹುದಾಗಿದೆ.
ಪ್ರಸ್ತುತ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಇದುವರೆಗೆ ಕೇವಲ ಶೇಕಡಾ 52 ರಷ್ಟು ನೌಕರರು ಮಾತ್ರ ಈ ಯೋಜನೆಯಡಿ ತಮ್ಮ ಖಾತೆಯನ್ನು ಪರಿವರ್ತಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ‘ಸಿ’ ಮತ್ತು ‘ಡಿ’ ಗುಂಪಿನ ನೌಕರರು ಈ ಯೋಜನೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇತ್ತೀಚೆಗಷ್ಟೇ ಬಿ.ಎಲ್.ಒ. ಕರ್ತವ್ಯದಲ್ಲಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಹಾಗೂ ಒಬ್ಬ ಪುರುಷ ನೌಕರರು ಅಪಘಾತ ಮತ್ತು ಹೃದಯಾಘಾತದಿಂದ ಆಕಸ್ಮಿಕವಾಗಿ ಮೃತಪಟ್ಟಿದ್ದು, ಅವರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನೌಕರನೂ ಈ ಯೋಜನೆಯ ಲಾಭ ಪಡೆಯುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಸಂಘದ ಅಧ್ಯಕ್ಷರು ಒತ್ತಿಹೇಳಿದ್ದಾರೆ.
ಈಗಾಗಲೇ ಈ ಯೋಜನೆಗೆ ನೋಂದಾಯಿಸಿಕೊಂಡು ಅಪಘಾತಕ್ಕೀಡಾದ ಹಲವು ನೌಕರರ ಕುಟುಂಬಗಳಿಗೆ ಈ ವಿಮಾ ಸೌಲಭ್ಯವು ದೊಡ್ಡ ಆಸರೆಯಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಸಾಮಾನ್ಯ ಉಳಿತಾಯ ಖಾತೆಯನ್ನು ಸಂಬಳ ಪ್ಯಾಕೇಜ್ ಖಾತೆಯನ್ನಾಗಿ ಪರಿವರ್ತಿಸಲು ನೌಕರರು ಯಾವುದೇ ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಅಗತ್ಯವಿರುವುದಿಲ್ಲ. ನೌಕರರು ತಮಗೆ ಅನುಕೂಲಕರವಾದ ಅಥವಾ ಇಷ್ಟದ ಬ್ಯಾಂಕ್ ಶಾಖೆಗೆ ಖುದ್ದಾಗಿ ಭೇಟಿ ನೀಡಿ, ಉಚಿತ ವಿಮಾ ಸೌಲಭ್ಯವನ್ನು ಸಕ್ರಿಯಗೊಳಿಸಿಕೊಳ್ಳಬಹುದು .
ಆಪತ್ಕಾಲದಲ್ಲಿ ಪತ್ನಿ, ಪತಿ, ಮಕ್ಕಳು ಹಾಗೂ ವೃದ್ಧ ಪೋಷಕರಿಗೆ ಆರ್ಥಿಕ ರಕ್ಷಣೆ ನೀಡುವ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಜುಲೈ ಮತ್ತು ಆಗಸ್ಟ್ ತಿಂಗಳುಗಳನ್ನು ವಿಶೇಷ ಅವಧಿಯನ್ನಾಗಿ ನಿಗದಿಪಡಿಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಸಮಸ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ಈ ಎರಡು ತಿಂಗಳೊಳಗೆ ತಮ್ಮ ವೇತನ ಖಾತೆಯನ್ನು ‘ಸಂಬಳ ಪ್ಯಾಕೇಜ್’ ಖಾತೆಗೆ ಪರಿವರ್ತಿಸಿಕೊಂಡು ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.











