ದಾವಣಗೆರೆ : ನಗರದಲ್ಲಿ ಹೊಸ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿದ್ದು, ನಿವೇಶನಗಳನ್ನು ಖರೀದಿಸಿ ಕಟ್ಟಡ ನಿರ್ಮಿಸದೆ ಖಾಲಿ ಬಿಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿಗಳು ಬೆಳೆದು, ಹಾವು ಹಾಗೂ ಚೇಳುಗಳಂತಹ ವಿಷ ಜಂತುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿವೆ. ಇದರಿಂದಾಗಿ ನೆರೆಹೊರೆಯಲ್ಲಿ ವಾಸಿಸುವ ನಾಗರಿಕರಿಗೆ ತೊಂದರೆಯಾಗುತ್ತಿರುವುದಲ್ಲದೆ, ಮಳೆಗಾಲದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ, ನಗರದ ನೈರ್ಮಲ್ಯ ಹಾಗೂ ಸೌಂದರ್ಯಕ್ಕೂ ಧಕ್ಕೆಯುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನಗಳ ಮಾಲೀಕರು ಈ ಪ್ರಕಟಣೆ ಹೊರಬಿದ್ದ 15 ದಿನಗಳ ಒಳಗಾಗಿ ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಬೇಕು ಎಂದು ತಿಳಿಸಿದ್ದಾರೆ.
ನಿಗದಿತ ಅವಧಿಯಲ್ಲಿ ಸ್ವಚ್ಛಗೊಳಿಸದಿದ್ದರೆ, ಮಹಾನಗರ ಪಾಲಿಕೆಯಿಂದಲೇ ನಿವೇಶನವನ್ನು ಸ್ವಚ್ಛಗೊಳಿಸಿ, ಅದಕ್ಕೆ ತಗುಲುವ ವೆಚ್ಚವನ್ನು ನಿವೇಶನ ಮಾಲೀಕರ ಆಸ್ತಿ ತೆರಿಗೆಯ ಬಾಕಿ ಮೊತ್ತದಲ್ಲಿ ಸೇರಿಸಿ ವಸೂಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಖಾಲಿ ನಿವೇಶನಗಳ ಅಳತೆ ಹಾಗೂ ಸ್ವಚ್ಛತಾ ಶುಲ್ಕದ ವಿವರ: 20×30 (600 ಚ.ಅಡಿ): ರೂ. 2,500 , 30×40 (1200 ಚ.ಅಡಿ) ರೂ. 5,100 ,30×50 (1500 ಚ.ಅಡಿ): ರೂ. 6,100, 4. 40×60 (2400 ಚ.ಅಡಿ): ರೂ. 9,100, 50×80 (4000 ಚ.ಅಡಿ): ರೂ. 12,150 ,4000 ಚ.ಅಡಿಗಳಿಗಿಂತ ಮೇಲ್ಪಟ್ಟ ನಿವೇಶನಗಳಿಗೆ ಸಮಾನುಪಾತ (Proportionate) ಆಧಾರದ ಮೇಲೆ ಶುಲ್ಕ ವಿಧಿಸಲಾಗುವುದು.
ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯದ ಹಿತದೃಷ್ಟಿಯಿಂದ ನಿವೇಶನದಾರರು ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಾದ ಮಹಾಂತೇಶ್ ಅವರು ತಿಳಿಸಿದ್ದಾರೆ










