ದಾವಣಗೆರೆ: ಜಿಲ್ಲೆಯ ಪ್ರತಿ ಪಶುವೈದ್ಯಕೀಯ ಸಂಸ್ಥೆಯಲ್ಲಿ ಉಚಿತ ಮೇವಿನ ಬೀಜದ ಕಿರುಪೊಟ್ಟಣಗಳು ಲಭ್ಯವಿದ್ದು, ಜಾನುವಾರುಗಳನ್ನು ಹೊಂದಿರುವ ಅರ್ಹ ರೈತರು ನಿಗದಿತ ದಾಖಲೆಗಳನ್ನು ಸಲ್ಲಿಸಿ ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಮ್ಮಿಕೊಂಡಿದ್ದ ಮೇವು ಬೀಜ ಕಿರುಪೊಟ್ಟಣಗಳನ್ನು ರೈತರಿಗೆ ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಸೃಷ್ಟಿಯಾಗಿರುವ ಬರ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಗೆ ಪೂರೈಕೆಯಾಗಿರುವ ಸೊರಗಮ್ ಮೇವಿನ ಜೋಳ ಹಾಗೂ ಆಫ್ರಿಕನ್ ಟಾಲ್ ತಳಿಯ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.
ಜಾನುವಾರುಗಳನ್ನು ಹೊಂದಿರುವ ರೈತರು ತಮ್ಮ ಜಮೀನಿನಲ್ಲಿ ಮೇವನ್ನು ಉತ್ಪಾದಿಸಲು ಸಿದ್ಧರಿರಬೇಕು. ಉಚಿತ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಪಡೆದು, ಅದನ್ನು ತಮ್ಮ ಸ್ವಂತ ಜಮೀನಿನಲ್ಲೇ ಬೆಳೆದು ಜಾನುವಾರುಗಳಿಗೆ ಉಚಿತವಾಗಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 11,751 ಮೇವಿನ ಬೀಜದ ಕಿರುಪೊಟ್ಟಣಗಳು ಸರಬರಾಜಾಗಿದ್ದು, ಎಲ್ಲಾ ತಾಲೂಕುಗಳಲ್ಲಿ ವಿತರಿಸಲಾಗುತ್ತಿದೆ. ಆದ್ದರಿಂದ ಜಾನುವಾರುಗಳನ್ನು ಹೊಂದಿರುವ ಆಸಕ್ತ ರೈತರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಸಮೀಪದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ ಉಚಿತವಾಗಿ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕರಾದ ಡಾ.ಮಹೇಶ್ , ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಜಿಲ್ಲಾ ಮಟ್ಟದ ಅಧಿಕಾರಿಗಳು ರೈತರು ಹಾಗೂ ಇತರರು ಉಪಸ್ಥಿತರಿದ್ದರು.











