ಬೆಂಗಳೂರು.ಜು.04: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ‘ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ’ (KAAMS) ಅಡಿಯಲ್ಲಿ “ಕರ್ತವ್ಯ” (KARTAVYA) ಮೊಬೈಲ್ ಅಪ್ಲಿಕೇಶನ್ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸುವಂತೆ ಪೊಲೀಸ್ ಪ್ರಧಾನ ಕಚೇರಿ ಕಟ್ಟುನಿಟ್ಟಿನ ಜ್ಞಾಪನಾ ಪತ್ರ (Reminder) ಹೊರಡಿಸಿದೆ.
ಸರ್ಕಾರದ ಆದೇಶದನ್ವಯ ಮೇ 1, 2026 ರಿಂದಲೇ ಎಲ್ಲಾ ಸರ್ಕಾರಿ ನೌಕರರು ಈ ಆ್ಯಪ್ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ. ಆದಾಗ್ಯೂ, ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ನೂ ಈ ಆ್ಯಪ್‌ನಲ್ಲಿ ನೋಂದಣಿ (Register) ಮಾಡಿಕೊಳ್ಳದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಈ ಪ್ರಮುಖ ಜ್ಞಾಪನೆಯನ್ನು ನೀಡಿದೆ.
ಕರ್ತವ್ಯ ಆ್ಯಪ್‌ನಲ್ಲಿ ಇದುವರೆಗೆ ರಿಜಿಸ್ಟರ್ ಮಾಡಿಕೊಳ್ಳದ ಅಧಿಕಾರಿಗಳು/ನೌಕರರು ತಕ್ಷಣವೇ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಸಿಬ್ಬಂದಿಗಳು ಪ್ರತಿದಿನ ಬೆಳಗ್ಗೆ 10:00 ಗಂಟೆಗೆ ಆ್ಯಪ್ ಮೂಲಕ ಕಡ್ಡಾಯವಾಗಿ CHECK IN ಮಾಡಬೇಕು ಹಾಗೂ ಕಚೇರಿಯಿಂದ ನಿರ್ಗಮಿಸುವಾಗ ತಪ್ಪದೇ CHECK OUT ದಾಖಲಿಸಬೇಕು. ಇಲಾಖೆಯ ಎಲ್ಲಾ ಘಟಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇನ್ನೂ ನೋಂದಣಿ ಮಾಡಿಕೊಳ್ಳದ ಸಿಬ್ಬಂದಿಗಳಿಂದ ಕೂಡಲೇ ರಿಜಿಸ್ಟರ್ ಮಾಡಿಸಿ, ಹಾಜರಾತಿ ನಮೂದಿಸುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ.
ಈ ಆದೇಶವನ್ನು ಉಲ್ಲಂಘಿಸುವ ಅಥವಾ ರಿಜಿಸ್ಟರ್ ಮಾಡಿಕೊಳ್ಳದ ನೌಕರರಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪೊಲೀಸ್ ಪ್ರಧಾನ ಕಚೇರಿಯ ಉಪ ಪೊಲೀಸ್ ಮಹಾ ನಿರೀಕ್ಷಕರು (ಕೇಂದ್ರಸ್ಥಾನ) ಹಾಗೂ KAAMS ನೋಡಲ್ ಅಧಿಕಾರಿಯಾದ ಟಿ. ಶ್ರೀಧರ್ (ಐ.ಪಿ.ಎಸ್) ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



















