ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 15 : ಆರ್ಟ್ ಗ್ಯಾಲರಿ ನಿರ್ಮಿಸುವ ಮೂಲಕ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಲಲಿತ ಕಲಾ ಅಕಾಡೆಮಿ ಸದಸ್ಯ ಸಿ.ಕಣ್ಮೇಶ್ ತಿಳಿಸಿದರು.

ಕೋಟೆ ಸಮೀಪವಿರುವ ಮಯೂರ ಯಾತ್ರಿ ನಿವಾಸದ ಆವರಣದಲ್ಲಿ ಲಲಿತ ಕಲಾ ಅಕಾಡೆಮಿ, ಚಿತ್ರ ಕಲಾವಿದರ ಬಳಗದಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕಲಾ ದಿನಾಚರಣೆ ಉದ್ಗಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಲಾವಿದರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಕಲಾವಿದರಿಗೆ ಆರ್ಟ್ ಗ್ಯಾಲರಿ ತುಂಬಾ ಅವಶ್ಯಕತೆಯಿದೆ. ಇದರಿಂದ ಜಿಲ್ಲೆಗೆ ಕಲಾಸ್ಪರ್ಶ ನೀಡುತ್ತದೆ. ಗ್ಯಾಲರಿ ನಿರ್ಮಾಣದ ಬಗ್ಗೆ ಈ ಹಿಂದೆ ಒಂದಿಷ್ಟು ಪ್ರಕ್ರಿಯೆ ನಡೆಸಲಾಗಿತ್ತು. ನಾನಾ ಕಾರಣಗಳಿಂದ ಅದು ನೆನೆಗುದಿಗೆ ಬಿದ್ದಿದೆ. ಶೀಘ್ರವೇ ಜಿಲ್ಲೆಯ ಎಲ್ಲಾ ಕಲಾವಿದರ ಸಭೆ ನಡೆಸಿ ಪ್ರಕ್ರಿಯೆಗೆ ವೇಗ ನೀಡಲಾಗುವುದು ಎಂದರು.
ಸಾವಿರಾರು ಕಥೆ, ಆಲೋಚನೆ, ಭಾವನೆಗಳನ್ನು ವ್ಕಕ್ತಪಡಿಸುವ ಶಕ್ತಿ ಚಿತ್ರಕಲೆಗಿದೆ. ಪುರಾತನ ಕಾಲದಿಂದಲೂ ಈ ಪರಂಪರೆ ಅಸ್ತಿತ್ವದಲ್ಲಿದೆ. ಕಲೆಗೆ ಮತ್ತು ಕಲಾವಿದರಿಗೆ ಗೌರವ ಸಲ್ಲಿಸುವುದಕ್ಕಾಗಿ ಪ್ರತಿ ವರ್ಷವೂ ಇಟಲಿಯ ಶ್ರೇಷ್ಟ ವರ್ಣ ಚಿತ್ರಕಾರ ಲಿಯೊನಾರ್ಡೊ ಡಾವಿನ್ಸಿಯವರ ಜನ್ಮದಿನದ ಪ್ರಯುಕ್ತ ಏ.15 ರಂದು ಪ್ರಪಂಚದಾದ್ಯಂತ ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಲಿಯನಾರ್ಡೊ ಡಾವಿನ್ಸಿ ಒಬ್ಬ ವರ್ಣಚಿತ್ರಕಾರ, ಶಿಲ್ಪಿ, ವಾಸ್ತುಶಿಲ್ಪಿ, ಸಂಗೀತಗಾರ, ನುರಿತ ಮೆಕ್ಯಾನಿಕ್, ಎಂಜಿನಿಯರ್ ಮತ್ತು ವಿಜ್ಞಾನಿ. ತಮ್ಮ ಕಲೆಯಲ್ಲಿನ ಪ್ರಾವೀಣ್ಯತೆಯಿಂದಲೆ ವಿಶ್ವಾದ್ಯಂತ ಖ್ಯಾತಿಯನ್ನು ಪಡೆದವರು. ಇಂತಹ ಮಹಾನ್ ಕಲಾವಿದನ ಜನ್ಮದಿನದ ಸವಿನೆನಪಿಗಾಗಿ 2012 ರಲ್ಲಿ ವಿಶ್ವ ಕಲಾ ದಿನಾಚರಣೆಯನ್ನು
ಪ್ರಾರಂಭಿಸಲಾಯಿತೆಂದರು.
ಸಾಹಿತಿ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ಮಾತನಾಡಿ ಕಲಾವಿದರು ಸಕಾಲಕ್ಕೂ ಸಲ್ಲುತ್ತಾರೆ. ಕಾಲ ಕಾಲಕ್ಕೆ ಎದುರಾಗುವ ಎಲ್ಲಾ ಅಡ್ಡಿ ಆತಂಕಗಳನ್ನು ಎದುರಿಸಿ
ಕಲೆಯನ್ನು ಗೆಲ್ಲುವ ಶಕ್ತಿ ಚಿತ್ರಕಲಾವಿದರಿಗೆ ಇದೆ ಎಂದು ತಿಳಿಸಿದರು.
ಚಿತ್ರಕಲೆ ಕೇವಲ ಕಲೆಯಾಗಿರದೆ ಅನೇಕ ಸಂಸ್ಕøತಿ, ಸಮುದಾಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕಲೆ ಮಾನವ ಸಂಸ್ಕøತಿಯ ಅತ್ಯಗತ್ಯ ಭಾಗವಾಗಿದೆ. ಹಿಂದಿನಿಂದಲೂ ಭಾವನೆಗಳನ್ನು ವ್ಯಕ್ತಪಡಿಸಲು ಸಂವಹನ ನಡೆಸಲು ಸುತ್ತಲಿನ ಪ್ರಪಂಚದ ಸೌಂದರ್ಯವನ್ನು ಸೆರೆ ಹಿಡಿಯಲು ಚಿತ್ರಕಲೆಯನ್ನೇ ಬಳಸಲಾಗುತ್ತಿತ್ತು. ಚಿತ್ರ ಕಲಾವಿದರ ಕೊಡುಗೆಗಳು ಕೂಡ ನಮ್ಮ ಸಂಸ್ಕøತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಮಾತನಾಡಿ ಚಿತ್ರಕಲೆಗೆ ತನ್ನದೆ ಆದ ಶಕ್ತಿಯಿದ್ದು, ಎಲ್ಲರನ್ನು ಕ್ಷಣ ಮಾತ್ರದಲ್ಲಿ ತನ್ನತ್ತ ಸೆಳೆಯುತ್ತದೆ. ಎಲ್ಲರೂ ಸೇರುವುದು ಒಂದು ಕಲೆ. ಇದು ನಮ್ಮೆಲ್ಲರ ಭಾವನೆ ಜೊತೆಗೆ ಗುಣಾತ್ಮಕ ಶಕ್ತಿ ತುಂಬಲಿದೆ ಎಂದು ನುಡಿದರು.
ಕಲೆಗೆ ಗೌರವ ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಗುರಿ ಹೊಂದಿದೆ. ಸಾಹಿತ್ಯ, ಚಿತ್ರಕಲೆ ಒಂದಕ್ಕೊಂದು ಪೂರಕ. ಸಾಹಿತ್ಯದಲ್ಲಿ ಪುಟಗಟ್ಟಲೆ ಬರೆಯುವುದನ್ನು ಒಂದು ಚಿತ್ರದಲ್ಲಿ ಪ್ರತಿಬಿಂಬಿಸಲು ಸಾಧ್ಯ. ಭಾರತೀಯ ಶಿಲ್ಪಕಲೆ
ಜಗದ್ವಿಖ್ಯಾತಿ ಪಡೆದಿದೆ. ಹಳೆಯದನ್ನು ಉಳಿಸಿಕೊಂಡು ಹೊಸ ಸೃಜನಶೀಲ ಕಲೆಯನ್ನು ಬೆಳೆಸಿಕೊಂಡು ಹೋಗುವುದು ಅವಶ್ಯ ಎಂದರು.
ಚಿತ್ರಕಲಾವಿದ ಕ್ರಿಯೇಟಿವ್ ವೀರೇಶ್ ಮಾತನಾಡಿ ಚಿತ್ರ ಕಲಾವಿದರು ನಿರಂತರ ಅಧ್ಯಯನದಲ್ಲಿ ತೊಡಗಬೇಕು. ನಮ್ಮ ಚಿತ್ರಗಳು ಜನಮಾನಸದಲ್ಲಿ ಉಳಿಯಬೇಕಾದರೆ ಅಧ್ಯಯನ, ಸಂಶೋಧನೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಚಿತ್ರಕಲಾವಿದ ದಾದಾಪೀರ್ ಇಳಿ ಸಂಜೆಯ ಕೋಟೆ ದೃಶ್ಯವನ್ನು ಬಿಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಿದರು. ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ, ಚಿತ್ರಕಲಾವಿದ ಸಿದ್ದಾಪುರ ಶಿವಕುಮಾರ್ ವೇದಿಕೆಯಲ್ಲಿದ್ದರು.

