ಚಿತ್ರದುರ್ಗ. ಏಪ್ರಿಲ್.14 : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ವಿಜೃಂಭಣೆಯಿಂದ ಜರುಗಿತು. ಜಯಂತಿ ಅಂಗವಾಗಿ ನಗರದ ಕನಕದಾಸ ವೃತ್ತದಿಂದ ತರಾಸು ರಂಗಮಂದಿರದವರೆಗೆ ಆಯೋಜಿಸಲಾದ ಡಾ. ಬಿ.ಆರ್.ಅಂಬೇಡ್ಕರ್ ಭಾಚಿತ್ರದೊಂದಿಗಿನ ವಿವಿಧ ಇಲಾಖೆಗಳ ಆಕರ್ಷಕ ಸ್ತಬಚಿತ್ರ ಮೆರವಣಿಗೆ ಜನಮನ ಸೆಳೆಯಿತು.
ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ನಗರ ಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್.ರಾಘವೇಂದ್ರ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ತಾಜ್‍ಪೀರ್ ಅವರು ಅಂಬೇಡ್ಕರ್ ಭಾಚಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮೆರವಣಿಗೆ ಚಾಲನೆ ನೀಡಿದರು.
ಸಂವಿಧಾನ ಮಹತ್ವ ಸಾರಿದ ಸ್ತಬ್ದಚಿತ್ರಗಳು:
ಕೃಷಿ, ತೋಟಗಾರಿಕೆ, ಶಿಕ್ಷಣ ಇಲಾಖೆ ಸ್ತಬ್ದಚಿತ್ರಗಳು ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಹಾಗೂ ಸಂವಿಧಾನದ ಮಹತ್ವವನ್ನು ಸಾರಿದವು. ಕೃಷಿ ಇಲಾಖೆಯು ಹೂವಿನಿಂದಲೇ ಅಂಬೇಡ್ಕರ್ ಹಾಗೂ ಸಂವಿಧಾನ ಪ್ರತಿಕೃತಿಯನ್ನು ರಚಿಸಿ ನೋಡುಗರ ಗಮನ ಸೆಳೆಯಿತು. ತೋಟಗಾರಿಕೆ ಇಲಾಖೆ ಸಂವಿಧಾನ ರಚನೆ ಕರಡು ಸಮಿತಿ ಅಧ್ಯಕ್ಷ ಡಾ.ಬಿ.ಆರ್.ಅಂಬೇಡ್ಕರ್ ಪೂರ್ಣಗೊಂಡ ಸಂವಿಧಾನ ಪ್ರತಿಕೃತಿಯನ್ನು ಅಂದಿನ ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಹಸ್ತಾಂತರಿಸುವ ಐತಿಹಾಸಿಕ ಗಳಿಗೆಯನ್ನು ಸ್ತಬ್ದಚಿತ್ರದ ಮೂಲಕ ಮರುಸೃಷ್ಠಿಸಿತ್ತು. ಇದರೊಂದಿಗೆ ಸಂವಿಧಾನ ಪೀಠಿಕೆ, ಅಂಬೇಡ್ಕರ್ ಅವರ ಜೀವನದ ಅಮೂಲ್ಯ ಕ್ಷಣಗಳ ಸಾಕ್ಷೀಕರಿಸಿರುವ ಫೋಟೋಗಳ ಸಂಗ್ರಹ ಐತಿಹಾಸಿಕ ಕ್ಷಣಗಳನ್ನು ನೋಡುಗರ ಮುಂದೆ ತೆರೆದಿಟ್ಟಿತ್ತು. ಶಾಲಾ ಸಾಕ್ಷರತಾ ಇಲಾಖೆಯು ಸ್ತಬ್ದಚಿತ್ರ ಹಳೆ ಸಂಸತ್ತು ಭವನ ಹಾಗೂ ಸಂವಿಧಾನ ಪೀಠಿಕೆ ಕಲಾಕೃತಿಯ ಮೂಲಕ ಸಂವಿಧಾನ ಮಹತ್ವ ಸಾರಿತು.
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅಂಶಗಳನ್ನು ಪ್ರಚುರಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶೇಷ ರೂಪಕವನ್ನು ಮೆರವಣಿಯಲ್ಲಿ ಸಾದರಪಡಿಸಿತು. 18 ವರ್ಷದ ಒಳಗಿನ ಬಾಲಕಿ ಹಾಗೂ 21 ವರ್ಷದ ಒಳಗಿನ ಯುವಕರ ಮದುವೆ ಮಾಡುವುದು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ. ವಿವಾಹ ನೆರವೇರಿಸಿದ ತಂದೆ ತಾಯಿ, ಬಂಧುಗಳು, ಮದುವೆಯಲ್ಲಿ ಹಾಜರಿದ್ದವರು, ಶಾಮೀಯಾನದವರು, ಪುರೋಹಿತರು, ಕಲ್ಯಾಣ ಮಂಟಪದವರು ಸಹ ಎರಡು ವರ್ಷದ ಶಿಕ್ಷೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಮನಮುಟ್ಟುವಂತೆ ಸಾರ್ವಜನಿಕರಿಗೆ ತಿಳಿಯಪಡಿಸಿತು.
ಜಲಜೀವನ್ ಮಿಷನ್‍ನ ಜಲೋತ್ಸವ ಸ್ತಬ್ದಚಿತ್ರ ಹರ್ ಘರ್ ಜಲ್ ಯೋಜನೆ ಮೂಲಕ ಗ್ರಾಮಿಣ ಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಸರಬಾಜು ಯೋಜನೆ ಮಹತ್ವ ಸಾರಿತು. ಕಾರ್ಮಿಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೆ.ಎಸ್.ಆರ್.ಟಿ.ಯ ಶಕ್ತಿ ಸ್ತಬ್ದಚಿತ್ರಗಳು ಆಯಾ ಇಲಾಖೆಗಳ ಮಹತ್ವದ ಕಾರ್ಯಕ್ರಮಗಳ ಮಾಹಿತಿಯನ್ನು ಜನರಿಗೆ ನೀಡಿದವು. 
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಮೆರವಣಿಗೆ ಹೊಳಲ್ಕೆರೆ ರಸ್ತೆಯ ಕನಕದಾಸ ವೃತ್ತದಿಂದ ಆರಂಭವಾಗಿ, ಸಂಗೊಳ್ಳಿರಾಯಣ್ಣ ವೃತ್ತ, ಗಾಂಧಿ ವೃತ್ತ, ಎಸ್.ಬಿ.ಐ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತವನ್ನು ಬಳಿಸಿ ತರಾಸು ರಂಗಮಂದಿರ ತಲುಪಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಪೌರಾಯುಕ್ತೆ ಎಂ.ರೇಣುಕಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಕಾಳೆಸಿಂಗೆ, ಜಂಟಿಕೃಷಿ ನಿರ್ದೇಶಕ ಮಂಜುನಾಥ್, ರಾಜಣ್ಣ, ಬಾಳೆಕಾಯಿ ಶ್ರೀನಿವಾಸ್, ಮಂಜುನಾಥ್, ಮಹಾಂತೇಶ್ ಸೇರಿದಂತೆ ಹಲವು ಮುಖಂಡರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಂಘಟನೆಗಳ ಮುಖಂಡರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.























