ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಜೋರಾಗಿದೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಹಂತದ ಸಮಾಲೋಚನೆಗಳು ನಡೆಯುತ್ತಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಜುಲೈ 10ರಿಂದ 12ರೊಳಗೆ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವ ಅತೃಪ್ತ ಶಾಸಕರನ್ನು ಸಮಾಧಾನಪಡಿಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಸಚಿವಾಕಾಂಕ್ಷಿಗಳ ಸಂಭಾವ್ಯ ಪಟ್ಟಿಯೊಂದಿಗೆ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೈಕಮಾಂಡ್ ಸಭೆಯತ್ತ ಎಲ್ಲರ ಚಿತ್ತ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮತ್ತಷ್ಟು ವೇಗ ಪಡೆದಿದೆ.ಮೂಲಗಳ ಪ್ರಕಾರ, ಡಿ.ಕೆ. ಶಿವಕುಮಾರ್ ಅವರು ಜುಲೈ 5ರಂದು ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜಧಾನಿಗೆ ಭೇಟಿ ನೀಡಿ ಜುಲೈ 6 ಮತ್ತು 7ರಂದು ಎಐಸಿಸಿ ವರಿಷ್ಠರೊಂದಿಗೆ ಸಭೆ ನಡೆಸಲಿದ್ದಾರೆ.ಈ ಸಭೆಯಲ್ಲಿ ಅಂತಿಮ ಒಪ್ಪಿಗೆ ದೊರೆತರೆ ಜುಲೈ 10ರಿಂದ 12ರೊಳಗೆ ಹೊಸ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ
ರಾಜ್ಯದ ವಿವಿಧ ಭಾಗಗಳಿಂದ ಹಲವು ಹಿರಿಯ ಮತ್ತು ಪ್ರಭಾವಿ ಶಾಸಕರ ಹೆಸರುಗಳು ಸಚಿವ ಸ್ಥಾನಕ್ಕೆ ಕೇಳಿಬರುತ್ತಿವೆ.
ಉತ್ತರ ಕರ್ನಾಟಕ:
ಲಕ್ಷ್ಮಣ ಸವದಿ (ಬೆಳಗಾವಿ)
ಪ್ರಸಾದ್ ಅಬ್ಬಯ್ಯ (ಹುಬ್ಬಳ್ಳಿ-ಧಾರವಾಡ)
ಯಶವಂತರಾಯ ಪಾಟೀಲ / ಅಪ್ಪಾಜಿ ನಾಡಗೌಡ (ವಿಜಯಪುರ)
ಸಲೀಂ ಅಹ್ಮದ್ (ಕಲ್ಯಾಣ ಕರ್ನಾಟಕ)
ಮಧ್ಯ ಕರ್ನಾಟಕ ಮತ್ತು ಮಲೆನಾಡು:
ಬಿ. ನಾಗೇಂದ್ರ (ಬಳ್ಳಾರಿ)
ಬಸವರಾಜ ರಾಯರೆಡ್ಡಿ (ಕೊಪ್ಪಳ)
ರುದ್ರಪ್ಪ ಲಮಾಣಿ (ಹಾವೇರಿ)
ಬೇಳೂರು ಗೋಪಾಲಕೃಷ್ಣ (ಶಿವಮೊಗ್ಗ)
ರಘುಮೂರ್ತಿ (ಚಿತ್ರದುರ್ಗ)
ಎಸ್.ಎಸ್. ಮಲ್ಲಿಕಾರ್ಜುನ್ / ಡಿ.ಜಿ. ಶಾಂತನಗೌಡ (ದಾವಣಗೆರೆ)
ದಕ್ಷಿಣ ಕರ್ನಾಟಕ:
ಶ್ರೀನಿವಾಸ್ (ವಾಸು) (ತುಮಕೂರು)
ಕೆ.ಎಂ. ಶಿವಲಿಂಗೇಗೌಡ (ಹಾಸನ)
ಎನ್. ಚಲುವರಾಯಸ್ವಾಮಿ / ಪಿ.ಎಂ. ನರೇಂದ್ರಸ್ವಾಮಿ (ಮಂಡ್ಯ)
ಸಿ. ಪುಟ್ಟರಂಗಶೆಟ್ಟಿ (ಚಾಮರಾಜನಗರ)
ಶರತ್ ಬಚ್ಚೇಗೌಡ / ಸುಬ್ಬಾರೆಡ್ಡಿ (ಕೋಲಾರ)
ಬೆಂಗಳೂರು ಮತ್ತು ಕರಾವಳಿ:
ಬಿ.ಜೆಡ್. ಜಮೀರ್ ಅಹಮದ್ ಖಾನ್
ರಿಜ್ವಾನ್ ಅರ್ಷದ್
ಬಿ.ಕೆ. ಹರಿಪ್ರಸಾದ್ / ಕೃಷ್ಣಪ್ಪ
ತರೀಕೆರೆ ಶ್ರೀನಿವಾಸ್ (ಚಿಕ್ಕಮಗಳೂರು)
ಮಂಕಾಳ ವೈದ್ಯ / ಆರ್.ವಿ. ದೇಶಪಾಂಡೆ (ಉತ್ತರ ಕನ್ನಡ)
ಈ ಹೆಸರುಗಳ ಕುರಿತು ಇನ್ನೂ ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಅಂತಿಮ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್ ಸಭೆಯ ಬಳಿಕವೇ ಹೊರಬೀಳಲಿದೆ.ರಾಜ್ಯದ ರಾಜಕೀಯ ವಲಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ತೀವ್ರ ಕುತೂಹಲ ನಿರ್ಮಾಣವಾಗಿದ್ದು, ದೆಹಲಿಯಲ್ಲಿ ನಡೆಯಲಿರುವ ಸಭೆಯ ನಂತರವೇ ಹೊಸ ಸಚಿವರ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ.





















