ವೀರಶೈವ ಲಿಂಗಾಯತ ಒಳಪಂಗಡಗಳೆಲ್ಲಾ ಒಂದಾಗಿ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗಿದೆ :  ಜಿ.ತಾರಾನಾಥ್

2 Min Read

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಮೊ : 78998 64552

ಚಿತ್ರದುರ್ಗ, (ಆ.,07). : ವೀರಶೈವ ಲಿಂಗಾಯತ ಒಳಪಂಗಡಗಳೆಲ್ಲಾ ಒಂದಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ತಾರಾನಾಥ್ ಹೇಳಿದರು.

ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ವತಿಯಿಂದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಪ್ರತಿಭಾವಂತರನ್ನು ಗುರುತಿಸುವುದು ನಮ್ಮ ಮೂಲ ಉದ್ದೇಶ. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಇನ್ನು ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ. ನಮ್ಮ ಸಮಾಜದಲ್ಲಿ ಇನ್ನು ಸಾಕಷ್ಟು ಪ್ರತಿಭಾವಂತರಿದ್ದಾರೆ.

ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಇವರುಗಳೆಲ್ಲಾ ಮನುಕುಲಕ್ಕೆ ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ವೀರಶೈವ ಲಿಂಗಾಯತ ಸಮಾಜದಲ್ಲಿ ಅನೇಕ ಒಳಪಂಗಡಗಳಿವೆ. ಎಲ್ಲರೂ ಒಂದಾಗಿ ಸಂಘಟಿತರಾಗಬೇಕಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯರಾದ ಕೆ.ಸಿ.ರಮೇಶ್ ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಹಿಂದೆ ಗುರು ಮತ್ತು ಗುರಿ ಇರಬೇಕು. ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದರ ಜೊತೆಗೆ ವಿದ್ಯಾರ್ಥಿಗಳು ದೇಶಭಕ್ತಿ ಹಾಗೂ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಯಬೇಕು. ಆಕರ್ಷಣೆಗೆ ಒಳಗಾಗದೆ ಶಿಕ್ಷಣದ ಕಡೆ ಹೆಚ್ಚಿನ ಗಮನ ಕೊಡಿ. ಯಾವುದೆ ಕಾರಣಕ್ಕೂ ತಂದೆ ತಾಯಿಗಳಿಗೆ ಹೆಚ್ಚಿನ ಹೊರೆಯಾಗಬೇಡಿ. ಇಂತಹ ಸನ್ಮಾನಗಳನ್ನು ಸ್ವೀಕರಿಸುವುದರಿಂದ ಮುಂದೆ ಇನ್ನು ಹೆಚ್ಚಿನ ಸನ್ಮಾನ ಪುರಸ್ಕಾರಗಳು ದೊರಕಲಿವೆ ಎಂದು ಹೇಳಿದರು.

ಉಪಾಧ್ಯಕ್ಷ ವಿಜಯಣ್ಣ ಕೂನಬೇವು ಮಾತನಾಡಿ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜ ಕಟ್ಟಿರುವುದರ ಹಿಂದೆ ಅನೇಕರ ಪರಿಶ್ರಮವಿದೆ. ಸಮಾಜದ ಸೇವೆ ಸಲ್ಲಿಸಲು ಎಲ್ಲರೂ ಕಂಕಣಬದ್ದರಾಗಿದ್ದೇವೆ. ಅದರಂತೆ ಸಮಾಜದ ಬಾಂಧವರು ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ಸಹಕಾರ ಸಂಘ ಸ್ಥಾಪಿಸುವ ಉದ್ದೇಶವಿದೆ ಎಂದರು.

ಡಿ.ಕೆ.ಆರ್.ಗ್ರೂಪ್ಸ್ ರಾಂಪುರದ ಎಂ.ಡಿ.ಮಂಜುನಾಥ್ ಮಾತನಾಡುತ್ತ ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜ ಅಲ್ಪಸಂಖ್ಯಾತ ಸಮಾಜವಾಗಿದ್ದು, ಸಮಾಜವನ್ನು ಮೇಲೆತ್ತುವ ಕೆಲಸಕ್ಕೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಮಾಜದ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಿ ಸಮಾಜವನ್ನು ಸಂಘಟಿಸುವುದು ನಮ್ಮ ಉದ್ದೇಶ. ಪ್ರತಿ ಹಳ್ಳಿ ತಾಲ್ಲೂಕಿನಲ್ಲಿಯೂ ಸಂಘಟನೆ ಮಾಡಿಕೊಂಡು ಬರುತ್ತಿದ್ದೇವೆ. ಕೊರೋನಾ ಸಂದರ್ಭದಲ್ಲಿ ಅನೇಕ ಬಡವರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದ್ದೇವೆಂದು ಹೇಳಿದರು.

ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಸಮಾಜದ ಪ್ರತಿಭಾವಂತರು ಹಾಗೂ ನಿವೃತ್ತ ಯೋಧ ಹಾನಗಲ್ ತಹಶೀಲ್ದಾರ್ ಪಿ.ಎಸ್.ಯರ್ರಿಸ್ವಾಮಿ ಇವರುಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಜಿ.ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು.
ಟಿ.ಎಸ್.ಸುಪ್ರಿಯ ಪ್ರಾರ್ಥಿಸಿದರು. ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಸದಸ್ಯ ಎನ್.ಬಿ.ವಿಶ್ವನಾಥ್ ಸ್ವಾಗತಿಸಿದರು. ಸತೀಶ್ ವಂದಿಸಿದರು. ನಾಗರಾಜ್ ಸಂಗಂ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *