ದುರ್ಗದಲ್ಲಿ ಅಕ್ಕ ತಂಗಿ ಭೇಟಿ ಉತ್ಸವ ಸಡಗರ : ಕಣ್ತುಂಬಿಕೊಂಡ ಭಕ್ತರು

2 Min Read

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 15 : ನಗರದ ರಾಜಬೀದಿ ದೊಡ್ಡಪೇಟೆಯಲ್ಲಿ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಕ್ಕ-ತಂಗಿ ಭೇಟಿ ಉತ್ಸವ (ಬರಗೇರಮ್ಮ ಮತ್ತು ತಂಗಿ ತಿಪ್ಪಿನಘಟ್ಟಮ್ಮ ದೇವಿಯರ ‘ಭೇಟಿ) ಮಂಗಳವಾರ ರಾತ್ರಿ 10 : 30 ಕ್ಕೆ ಸಂಭ್ರಮದಿಂದ ನೆರೆವೇರಿತು. ಜಾನಪದ ಸೊಗಡಿನ ಈ ಭೇಟಿ ಉತ್ಸವ, ಪ್ರತಿವರ್ಷ ಶ್ರೀ ಏಕನಾಥೇಶ್ವರಿ ಅಮ್ಮನವರ ಉತ್ಸವದ ನಂತರ ಮೊದಲ ಮಂಗಳವಾರ ನಡೆಯುವುದು ವಾಡಿಕೆ.

ಸಂಜೆ ಗುಡುಗು ಸಹಿತ ಮಳೆಯಿಂದ ಅಲಂಕಾರ, ಮೆರವಣಿಗೆ ವಿಳಂಬವಾಗಿದ್ದರಿಂದ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ಇಬ್ಬರು ಭೇಟಿ ಸ್ಥಳ ದೊಡ್ಡಪೇಟೆಗೆ ಆಗಮಿಸುವುದು ತಡವಾಯಿತು. ಭೇಟಿ ನಡೆಯುವ ಶ್ರೀ ಬರಗೇರಮ್ಮ ಮಹಾದ್ವಾರ ಮತ್ತು ಶ್ರೀ ತಿಪ್ಪಿನಘಟ್ಟಮ್ಮ ಮಹಾದ್ವಾರಕ್ಕೆ ಅತ್ಯಾಕರ್ಷಕವಾದ ವಿಶೇಷವಾಗಿ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹೂವಿನಿಂದ ಚಿತ್ತಾಕರ್ಷಕ ರಂಗೋಲಿಯನ್ನು ಹಾಕಲಾಗಿತ್ತು.

ಮಳೆಯಿಂದ ತಂಪು ವಾತಾವರಣ ನಿರ್ಮಾಣವಾಗಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಎರಡು ಬದಿಯಲ್ಲೂ ಬಂಬೂ, ಬ್ಯಾರಿಕೇಡ್ ಗಳ ಮೂಲಕ ಭಕ್ತರು ಒಳಪ್ರವೇಶಿಸದ ರೀತಿ ಬಂದೋಬಸ್ತ್ ಮಾಡಲಾಗಿತ್ತು.

ಹೊಳಲ್ಕೆರೆ ರಸ್ತೆಯಿಂದ ಮೆರವಣಿಗೆ ಮೂಲಕ ಆಗಮಿಸಿದ ಬರಗೇರಮ್ಮ ಮತ್ತು ಜೋಗಿಮಟ್ಟಿ ರಸ್ತೆಯಿಂದ ಆಗಮಿಸಿದ ತಿಪ್ಪಿನಘಟ್ಟಮ್ಮ ದೇವಿಯರು ಮುಖಾಮುಖಿ ಆಗುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ದೇವಿಯರು ಎದುರುಗೊಳ್ಳುವುದು ಕೆಲವೇ ಕ್ಷಣಗಳು ಮಾತ್ರವಾದರೂ ಇದೊಂದು ಸ್ಮರಣೀಯ ಕ್ಷಣ ಎನ್ನಬಹುದು.

ಬಳಿಕ ಇಬ್ಬರು ದೇವತೆಯರು ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಲು ತೆರಳಿದರು. ತಿಪ್ಪಿನಘಟ್ಟಮ್ಮ ದೊಡ್ಡಪೇಟೆ, ಬುರುಜಿನಹಟ್ಟಿ, ನೆಹರು ನಗರ ಸೇರಿ ವಿವಿಧೆಡೆ ಸಂಚರಿಸಿದರೆ, ಬರಗೇರಮ್ಮ ಕರುವಿನಕಟ್ಟೆ, ಜೋಗಿಮಟ್ಟಿ ರಸ್ತೆ, ಸುಣ್ಣದಗುಮ್ಮಿ, ಜಟ್‌ಪಟ್ ನಗರ, ಸ್ಟೇಡಿಯಂ ಹೀಗೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಭಕ್ತರಿಂದ ಪೂಜೆ ಸ್ವೀಕರಿಸಿತು. ಈ ಮೂಲಕ ದುರ್ಗದ ಅಧಿಶಕ್ತಿ ದೇವತೆಗಳ
ಜಾತ್ರೋ ಮಹೋತ್ಸವಕ್ಕೆ ತೆರೆ ಬಿದ್ದಿತ್ತು. ಭೇಟಿ ಉತ್ಸವ ಹಿನ್ನೆಲೆಯಲ್ಲಿ ರಂಗಯ್ಯನಬಾಗಿಲು ಹಾಗೂ ಆನೆಬಾಗಿಲು ಒಳಗೆ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಚಿತ್ರದುರ್ಗ ನಗರ ಹಾಗೂ ಸುತ್ತಮುತ್ತಲಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಐತಿಹಾಸಿಕ ಭೇಟಿ ಉತ್ಸವವನ್ನು ಕಣ್ತುಂಬಿಕೊಂಡರು.

ಅಕ್ಕ-ತಂಗಿ ಭೇಟಿ ಬಹಳ ವಿಳಂಬ :
ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ ಪ್ರತಿ ವರ್ಷ ಮಂಗಳವಾರ ರಾತ್ರಿ 8 ರಿಂದ 9 ಗಂಟೆಯೊಳಗೆ ಆಗುತ್ತಿತ್ತು. ಇದೇ ಮೊದಲ ಬಾರಿಗೆ ಬಹಳಷ್ಟು ವಿಳಂಬವಾಗಿ ನಡೆಯಿತು. ಸಂಜೆ ವೇಳೆ ಗುಡುಗು ಸಹಿತ ಮಳೆ ಕಾರಣಕ್ಕೆ ಮೆರವಣಿಗೆ ಆರಂಭ ತಡವಾಗಿದ್ದರಿಂದ ಭೇಟಿ ಉತ್ಸವ ತಡವಾಯಿತು. ಆದರೂ ಭಕ್ತರು ಭೇಟಿ ಉತ್ಸವ ಕಣ್ತುಂಬಿಕೊಳ್ಳಲು ಕಾತರದಿಂದ ಕಾದಿದ್ದು, ಭೇಟಿ ಬಳಿಕವೇ ಚದುರಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಮಾಜಿ ಶಾಸಕ ಎಸ್. ಕೆ. ಬಸವರಾಜನ್, ಎಸ್.ಪಿ. ರಂಜಿತ್ ಕುಮಾರ್ ಬಂಡಾರು, ಡಿವೈಎಸ್ ಪಿ ದಿನಕರ್, ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಪೌರಾಯುಕ್ತರಾದ ರೇಣುಕಾ, ನಗರಸಭೆಯ ಸದಸ್ಯರು, ಮಾಜಿ ನಗರಸಭೆ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *