ಬೆಂಗಳೂರು: ಧ್ರುವ ಸರ್ಜಾ ವಿರುದ್ಧ ಮುಂಬೈನಲ್ಲಿ ಬಹುಕೋಟಿ ವಂಚನೆ ಕೇಸ್ ಪ್ರಕರಣ ದಾಖಲಾಗಿತ್ತು. ಇದೀಗ ಆ ಸಂಬಂಧ ಧ್ರುವ ಸರ್ಜಾ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಹಾಗಾದ್ರೆ ಆ ಕೇಸ್ ಯಾವುದು..? ಯಾರು ಹಾಕಿದ್ದು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.
ಧ್ರುವ ಸರ್ಜಾ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಧ್ರುವ ಸರ್ಜಾ ಅವರಿಗೆ ರಿಲೀಫ್ ಸಿಕ್ಕಿದೆ. ಧ್ರುವ ಸರ್ಜಾ ಅವರು ಸಿನಿಮಾ ಮಾಡಿಕೊಡುವುದಾಗಿ ಹೇಳಿ 3.10 ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದರಂತೆ. ಆದರೆ ಸಿನಿಮಾ ಮಾಡುವುದಕ್ಕೆ ಡೇಟ್ಸ್ ಕೇಳಿದರೆ, ಸಿಗದೆ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ರಾಘವೇಂದ್ರ ಹೆಗಡೆ ಎಂಬುವವರು ಈ ಆರೋಪ ಮಾಡಿದ್ದರು.
ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ಕೂಡ ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಅಂಬೋಲಿ ಪೊಲೀಸರು ನಟ ಧ್ರುವ ಸರ್ಜಾ ಮೇಲೆ ಎಫ್ಐಆರ್ ಹಾಕಿದ್ದರು. ಬಳಿಕ ಧ್ರುವ ಸರ್ಜಾ ಪರ ವಕೀಲರು ಬಾಂಬೆ ಹೈಕೋರ್ಟ್ ಮೊರೆ ಹೋದರು. ವಿಚಾರಣೆ ನಡೆಸಿದ ನ್ಯಾಯಾಲಯವು ಧ್ರುವ ಸರ್ಜಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸದಂತೆ ಸೂಚನೆ ನೀಡಿದೆ. ಅಲ್ಲದೆ ಇದೊಂದು ಸಿವಿಲ್ ಮೊಕದ್ದಮೆ ಆಗಿದ್ದು, ಮುಂಬೈ ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಂಡಂತಾಗಿದೆ. ಆದರೆ ನ್ಯಾಯಾಲಯವು ಮುಂದಿನ ವಿಚಾರಣೆವರೆಗೆ ಮಾತ್ರವೇ ಆರೋಪ ಪಟ್ಟಿ ಸಲ್ಲಿಸದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. 2018ರಲ್ಲಿ ಧ್ರುವ ಸರ್ಜಾ ಅವರು ಸೋಲ್ಜರ್ ಹೆಸರಿನ ಸಿನಿಮಾ ಮಾಡುವುದಕ್ಕೆ ರಾಘವೇಂದ್ರ ಅವರ ಬಳಿ ಮುಂಗಡವಾಗಿ 3 ಕೋಟಿ ಹಣವನ್ನು ಪಡೆದುಕೊಂಡಿದ್ದರು.










