ಬೆಂಗಳೂರು: ಕಾಂಗ್ರೆಸ್ ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನ ಕಾಂಗ್ರೆಸ್ ನಿಂದ ಅಮಾನತು ಮಾಡಲಾಗಿದೆ. ಈ ಸಂಬಂಧ ಅಮಾನತುಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸ್ಥಾನದಿಂದ ವಜಾಗೊಳಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಈ ನಿರ್ಧಾರವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತೆಗೆದುಕೊಂಡಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬಳಿಕ ಕಾಂಗ್ರೆಸ್ ನಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಅಬ್ದುಲ್ ಜಬ್ಬಾರ್ ವಿರುದ್ಧ ಮತ್ತಷ್ಟು ದಾಖಲೆಗಳು ಲಭ್ಯವಾಗಿವೆ. ಆಡಿಯೋವೊಂದು ವೈರಲ್ ಆಗಿದ್ದು, ಕೆಲವೊಂದು ಮಹತ್ವದ ಅಂಶಗಳನ್ನ ಜಬ್ಬಾರ್ ಉಲ್ಲೇಖ ಮಾಡಿದ್ದಾರೆ. ಆ ದಾಖಲೆಗಳು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಲಭಿಸಿದೆ. ಶೋಕಾಸ್ ನೋಟೀಸ್ ನೀಡದೆ ಜಬ್ಬಾರ್ ಅವರ ವಿರುದ್ಧ ಕಠಿಣ ಕ್ರಮವನ್ನ ಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಯಾಗಿ ಅಮಾನತುಗೊಳಿಸಿ, ಆದೇಶ ಹೊರಡಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಯಿಂದ ಕಾಂಗ್ರೆಸ್ ನಲ್ಲಿರುವ ಉಳಿದ ಅಲ್ಪಸಂಖ್ಯಾತರ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಹುದು ಎಂಬ ಆತಂಕದಲ್ಲಿದ್ದಾರೆ. ಜಬ್ಬಾರ್ ಕೂಡ ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜಮೀರ್ ಅಹ್ಮದ್ ಅವರ ಬೆಂಬಲವೂ ಅವರಿಗೆ ಇತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಜಬ್ಬಾರ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಲಾಗಿತ್ತು. ಸಮರ್ಥ್ ಅವರಿಗೆ ಟಿಕೆಟ್ ಕೊಟ್ಟ ಬಳಿಕವಂತು ಅಲ್ಪಸಂಖ್ಯಾತರು ಬಂಡಾಯವೆದ್ದಿದ್ದರು. ಸಾಧಿಕ್ ಪೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿದ್ದರು. ಹಾಗೋ ಹೀಗೋ ಅವರ ಮನಸ್ಸನ್ನು ಒಲೈಸಿ ನಾಮಪತ್ರ ವಾಪಾಸ್ ಪಡೆದಿದ್ದರು. ಆದರೂ ಎಲ್ಲವೂ ಸರಿ ಇಲ್ಲ ಎಂಬುದು ಈಗೀಗ ಅರ್ಥವಾದಂತೆ ಆಗಿದೆ.


















