ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಫ್ಲೈಓವರ್ ನಿರ್ಮಾಣಕ್ಕೆ ಅಡ್ಡಿಯಾಗಿರುವ ಸಂಪಿಗೆ ಮರವನ್ನು ಕಡಿಯುವ ವಿಚಾರ ಇದೀಗ ಮಂಗಳೂರಿನಲ್ಲಿ ಚರ್ಚೆಗೆ ಕಾರಣವಾಗಿದೆ. ನಂತೂರಿನ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಮುಂಭಾಗದಲ್ಲಿರುವ ಈ ಸಂಪಿಗೆ ಮರವನ್ನು ಕಡಿಯಲು ಅಧಿಕಾರಿಗಳು ಮುಂದಾಗಿದ್ದ ವೇಳೆ, ನೇಮೋತ್ಸವದಲ್ಲಿ ರಾಹು ಗುಳಿಗ ದೈವ ಮರವನ್ನು ಕಡಿಯಬಾರದು ಎಂದು ಎಚ್ಚರಿಕೆ ನೀಡಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ನಂತೂರಿನ ಬಬ್ಬುಸ್ವಾಮಿ ದೈವಸ್ಥಾನದ ಮುಂಭಾಗದಲ್ಲಿರುವ ಸಂಪಿಗೆ ಮರವನ್ನು ತೆರವುಗೊಳಿಸುವ ಪ್ರಸ್ತಾವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಬಂದಿತ್ತು. ಫ್ಲೈಓವರ್ ನಿರ್ಮಾಣಕ್ಕೆ ಮರ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಅದನ್ನು ಕಡಿಯುವ ಯೋಜನೆ ರೂಪಿಸಲಾಗಿತ್ತು ಎನ್ನಲಾಗಿದೆ.ಆದರೆ ನೇಮೋತ್ಸವದ ಸಂದರ್ಭದಲ್ಲಿ ರಾಹು ಗುಳಿಗ ದೈವ ಮರವನ್ನು ಏರಿ, “ಇದು ನನ್ನ ಮರ, ಯಾವುದೇ ಕಾರಣಕ್ಕೂ ಕಡಿಯಬಾರದು” ಎಂದು ಆಜ್ಞೆ ನೀಡಿದೆ ಎಂದು ಸ್ಥಳೀಯ ಭಕ್ತರು ತಿಳಿಸಿದ್ದಾರೆ.

ಈ ಸಂಪಿಗೆ ಮರದಲ್ಲಿ ರಾಹು ಗುಳಿಗ ದೈವ ನೆಲೆಸಿದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ನೇಮೋತ್ಸವದ ಸಂದರ್ಭದಲ್ಲಿ ದೈವವಾಣಿ ಮೂಲಕ ಮರವನ್ನು ಮುಟ್ಟದಂತೆ ಸೂಚನೆ ನೀಡಲಾಗಿದೆ ಎಂದು ಭಕ್ತರು ಹೇಳಿದ್ದಾರೆ.ಹೆದ್ದಾರಿ ಕಾಮಗಾರಿಗಾಗಿ ಮರ ತೆರವುಗೊಳಿಸುವ ಪ್ರಸ್ತಾವದ ಹಿನ್ನೆಲೆಯಲ್ಲಿ ಸ್ಥಳೀಯ ಭಕ್ತರಲ್ಲಿ ಆತಂಕ ಮೂಡಿದ್ದು, ಇದೀಗ ಮರವನ್ನು ಉಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಮರವನ್ನು ಉಳಿಸುವಂತೆ ಸ್ಥಳೀಯ ಭಕ್ತರು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸಂಪಿಗೆ ಮರಕ್ಕೆ ಯಾವುದೇ ಹಾನಿಯಾಗದಂತೆ ಫ್ಲೈಓವರ್ ಹಾಗೂ ಹೆದ್ದಾರಿ ಕಾಮಗಾರಿಯ ಯೋಜನೆಯಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಂತೂರಿನ ಸಂಪಿಗೆ ಮರದ ವಿಚಾರ ಇದೀಗ ಅಭಿವೃದ್ಧಿ ಕಾಮಗಾರಿ, ಸ್ಥಳೀಯ ಧಾರ್ಮಿಕ ನಂಬಿಕೆ ಹಾಗೂ ಪರಿಸರ ಸಂರಕ್ಷಣೆಯ ನಡುವಿನ ಚರ್ಚೆಗೆ ಕಾರಣವಾಗಿದೆ.ದೈವದ ಹೆಸರಿನಲ್ಲಾದರೂ ಪುರಾತನ ಮರಗಳು ಉಳಿದು ಪ್ರಕೃತಿ ಸಂರಕ್ಷಣೆಯಾಗಬೇಕು ಎಂಬ ಅಭಿಪ್ರಾಯವನ್ನು ಪರಿಸರ ಪ್ರಿಯರು ವ್ಯಕ್ತಪಡಿಸಿದ್ದಾರೆ. ಅದೇ ವೇಳೆ, ಹೆದ್ದಾರಿ ಕಾಮಗಾರಿಗೂ ಯಾವುದೇ ತೊಂದರೆಯಾಗದಂತೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.










