ನ್ಯೂಯಾರ್ಕ್: ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಯೊಂದು ದಾಖಲಾಗಿದೆ. ಅಮೆರಿಕದ 66 ವರ್ಷದ ಟಿಮ್ ಆಂಡ್ರ್ಯೂ ಎಂಬ ವ್ಯಕ್ತಿಗೆ ಅಳವಡಿಸಲಾಗಿದ್ದ ತಳೀಯವಾಗಿ ಮಾರ್ಪಡಿಸಿದ (ಜೆನೆಟಿಕಲಿ ಎಡಿಟೆಡ್) ಹಂದಿಯ ಮೂತ್ರಪಿಂಡವು (ಕಿಡ್ನಿ) ಬರೋಬ್ಬರಿ 9 ತಿಂಗಳುಗಳ ಕಾಲ (271 ದಿನಗಳು) ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಹೊಸ ಇತಿಹಾಸ ಸೃಷ್ಟಿಸಿದೆ.
ಟಿಮ್ ಆಂಡ್ರ್ಯೂ ಅವರ ಎರಡೂ ಮೂತ್ರಪಿಂಡಗಳು ಸಂಪೂರ್ಣವಾಗಿ ವಿಫಲವಾಗಿದ್ದವು. ಹೊಸ ಕಿಡ್ನಿ ಜೋಡಣೆ ಅನಿವಾರ್ಯವಾಗಿದ್ದರೂ, ಸೂಕ್ತ ಮಾನವ ದಾನಿಗಳು ಸಿಗಲಿಲ್ಲ. ಈ ಸಂದರ್ಭದಲ್ಲಿ ವೈದ್ಯರು ಅವರಿಗೆ ತಳೀಯ ಬದಲಾವಣೆ ಮಾಡಿದ ಹಂದಿಯ ಕಿಡ್ನಿಯನ್ನು ಅಳವಡಿಸಲು ನಿರ್ಧರಿಸಿದರು. 2025ರ ಜನವರಿಯಲ್ಲಿ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿತು.

ಡಯಾಲಿಸಿಸ್ ಇಲ್ಲದೆ 271 ದಿನಗಳ ಜೀವನ
ಹಂದಿಯ ಕಿಡ್ನಿ ಅಳವಡಿಸಿದ ನಂತರ ಆಂಡ್ರ್ಯೂ ಅವರು ಯಾವುದೇ ಡಯಾಲಿಸಿಸ್ ನೆರವಿಲ್ಲದೆ ಸತತ 9 ತಿಂಗಳು (271 ದಿನಗಳು) ಸಾಮಾನ್ಯ ಜೀವನ ನಡೆಸಿದರು. ವೈದ್ಯಕೀಯ ಇತಿಹಾಸದಲ್ಲಿ ಪ್ರಾಣಿಯ ಅಂಗವೊಂದು ಮಾನವ ದೇಹದಲ್ಲಿ ಇಷ್ಟು ದೀರ್ಘಕಾಲ ಕೆಲಸ ಮಾಡಿರುವುದು ಇದೇ ಮೊದಲು ಎಂದು ಮಾಸ್ ಬ್ರಿಗ್ಯಾಮ್ ಜನರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಆದರೆ, 9 ತಿಂಗಳ ನಂತರ ಕಿಡ್ನಿಯ ಸೂಕ್ಷ್ಮ ರಕ್ತನಾಳಗಳಲ್ಲಿ ಗಾಯಗಳು (ಮೈಕ್ರೋವ್ಯಾಸ್ಕುಲರ್ ಇಂಜುರಿ) ಹಾಗೂ ಊತ ಕಾಣಿಸಿಕೊಂಡವು. ಆಂಡ್ರ್ಯೂ ಅವರಿಗೆ ಸೋಂಕು ತಗುಲಿದ ಕಾರಣ, ಸುಮಾರು 6 ತಿಂಗಳ ಬಳಿಕ ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುವ ವ್ಯವಸ್ಥೆ (ಇಮ್ಯುನೊಸಪ್ರೆಷನ್) ದುರ್ಬಲಗೊಂಡು ಹಂದಿ ಕಿಡ್ನಿ ಹಾನಿಗೊಳಗಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರು ಆ ಕಿಡ್ನಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದರು. ಕೆಲ ದಿನಗಳ ಕಾಲ ಡಯಾಲಿಸಿಸ್ನಲ್ಲಿದ್ದ ಆಂಡ್ರ್ಯೂ ಅವರಿಗೆ 2026ರಲ್ಲಿ ಮಾನವ ದಾನಿಯ ಕಿಡ್ನಿ ದೊರೆತಿದ್ದು, ಯಶಸ್ವಿಯಾಗಿ ಕಸಿ ಮಾಡಲಾಗಿದೆ.
ಪ್ರಾಣಿಗಳ ಅಂಗಾಂಗ ಕಸಿ (ಕ್ಸೆನೋಟ್ರಾನ್ಸ್ಪ್ಲಾಂಟೇಶನ್) ಏಕೆ?
ಮಾನವರಲ್ಲಿ ಕಿಡ್ನಿ, ಹೃದಯ ಮುಂತಾದ ಪ್ರಮುಖ ಅಂಗಾಂಗಗಳ ಕೊರತೆ ವಿಪರೀತವಾಗಿದೆ. ಈ ಕೊರತೆಯನ್ನು ನೀಗಿಸಲು ವಿಶೇಷವಾಗಿ ಬೆಳೆಸಿದ ಹಂದಿಗಳಿಂದ ಅಂಗಾಂಗಗಳನ್ನು ಪಡೆಯಲಾಗುತ್ತದೆ. ಸಾಮಾನ್ಯವಾಗಿ ಮಾನವ ದೇಹವು ಅನ್ಯ ಪ್ರಾಣಿಯ ಅಂಗವನ್ನು ತಿರಸ್ಕರಿಸುತ್ತದೆ (ರಿಜೆಕ್ಷನ್). ಇದನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹಂದಿಯ ಜೀನ್ಗಳನ್ನು ಮಾರ್ಪಡಿಸಿ (ಜೆನೆಟಿಕಲಿ ಎಡಿಟೆಡ್), ಮಾನವನಿಗೆ ಹಾನಿ ಮಾಡುವ ವೈರಸ್ಗಳನ್ನು ತೆಗೆದುಹಾಕಲಾಗುತ್ತದೆ.
ಜೊತೆಗೆ ದೇಹವು ಹೊಸ ಅಂಗವನ್ನು ಸ್ವೀಕರಿಸಲು ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುವ ವಿಶೇಷ ಔಷಧಿಗಳನ್ನು ನೀಡಲಾಗುತ್ತದೆ. ಪ್ರಸ್ತುತ ಅಂಗಾಂಗ ಕೊರತೆಯಿಂದ ಬಳಲುತ್ತಿರುವ ರೋಗಿಗಳ ಜೀವ ಉಳಿಸಲು ಇಂತಹ ಪ್ರಯೋಗಗಳು ವೈದ್ಯಕೀಯ ಜಗತ್ತಿನಲ್ಲಿ ಹೊಸ ಆಶಾಕಿರಣ ಮೂಡಿಸಿವೆ.











