ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಸಂಚರಿಸುವ ರನ್‌ವೇ ಪ್ರದೇಶಕ್ಕೆ ಅನಿರೀಕ್ಷಿತವಾಗಿ ಬೃಹತ್ ಬಲೂನ್ ಒಂದು ಹಾರಿಬಂದಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ.
ಬಲೂನ್ ರನ್‌ವೇ ಮೇಲೆ ಬಿದ್ದ ಸಮಯದಲ್ಲಿ ಯಾವುದೇ ವಿಮಾನಗಳು ಟೇಕ್‌ಆಫ್ ಅಥವಾ ಲ್ಯಾಂಡಿಂಗ್ ಆಗುತ್ತಿರಲಿಲ್ಲ. ಒಂದು ವೇಳೆ ವಿಮಾನ ಸಂಚಾರವಿದ್ದಿದ್ದರೆ ಇಂಜಿನ್ ಒಳಗೆ ಬಲೂನ್ ಸಿಲುಕಿ ದೊಡ್ಡ ಮಟ್ಟದ ಸ್ಫೋಟ ಅಥವಾ ಅಪಘಾತ ಸಂಭವಿಸುವ ಸಾಧ್ಯತೆಯಿತ್ತು.

ತನಿಖೆಯ ಪ್ರಕಾರ, ಈ ಬಲೂನ್ ಬಿಸಿಡಿ ಕನ್‌ಸ್ಟ್ರಕ್ಷನ್ ಎಂಬ ಖಾಸಗಿ ಕಂಪನಿಗೆ ಸೇರಿದ್ದಾಗಿದೆ. ನಿರ್ಮಾಣ ಹಂತದ ಕಟ್ಟಡದ ಬಳಿ ಜಾಹೀರಾತಿಗಾಗಿ ಕಟ್ಟಲಾಗಿದ್ದ ಈ ಬಲೂನ್, ಗಾಳಿಯ ತೀವ್ರತೆಗೆ ದಾರ ತುಂಡಾಗಿ ನೇರವಾಗಿ ವಿಮಾನ ನಿಲ್ದಾಣದ ಸೂಕ್ಷ್ಮ ಪ್ರದೇಶಕ್ಕೆ ಹಾರಿ ಬಂದಿದೆ. ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಬಿಸಿಡಿ ಕನ್‌ಸ್ಟ್ರಕ್ಷನ್ ಕಂಪನಿ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.










