ಊಟ ಮಾಡಿದ ತಕ್ಷಣ ನಿದ್ರೆ ಮಾಡುವುದು ಅಥವಾ ಒಂದೇ ಕಡೆ ಕುಳಿತುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ತಿಂದ ಆಹಾರವು ದೇಹದಲ್ಲಿ ಅನಗತ್ಯ ಕೊಬ್ಬಾಗಿ ಪರಿವರ್ತನೆಯಾಗದೆ ಜೀರ್ಣವಾಗಲು ಮತ್ತು ತೂಕವನ್ನು ನಿಯಂತ್ರಣದಲ್ಲಿಡಲು ಊಟದ ನಂತರ ಕೇವಲ 10 ನಿಮಿಷಗಳ ನಡಿಗೆ (ವಾಕಿಂಗ್) ಅತ್ಯಂತ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಊಟದ ನಂತರ 10 ನಿಮಿಷಗಳ ನಡಿಗೆಯಿಂದ ಸಿಗುವ ಪ್ರಮುಖ ಪ್ರಯೋಜನಗಳು:
ಜೀರ್ಣಕ್ರಿಯೆ ಚುರುಕು: ಊಟದ ನಂತರ ಮಾಡುವ ಸಣ್ಣ ನಡಿಗೆಯು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಆಹಾರವು ಜೀರ್ಣನಾಳದಲ್ಲಿ ಸುಲಭವಾಗಿ ಚಲಿಸಲು ನೆರವಾಗುವುದರಿಂದ ಹೊಟ್ಟೆ ಉಬ್ಬರ, ಹೊಟ್ಟೆ ಭಾರವಾಗುವುದು ಮತ್ತು ಅಸಿಡಿಟಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.
ತೂಕ ನಿಯಂತ್ರಣ ಮತ್ತು ಮೆಟಬಾಲಿಸಂ ವೃದ್ಧಿ: ಉಪಾಹಾರ ಅಥವಾ ಊಟದ ಬಳಿಕ 10 ನಿಮಿಷಗಳ ನಡಿಗೆ ದೇಹದ ಚಯಾಪಚಯ ಕ್ರಿಯೆಯನ್ನು (Metabolism) ಹೆಚ್ಚಿಸುತ್ತದೆ. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಲು ಸಹಕಾರಿ. ವಿಶೇಷವಾಗಿ ರಾತ್ರಿಯ ಊಟದ ನಂತರ ನಡೆದು ಮಲಗುವುದರಿಂದ ತೂಕ ಇಳಿಕೆಗೆ ನೆರವಾಗುತ್ತದೆ.
ನಿದ್ರೆಮತ್ತು ಮತ್ತು ಆಲಸ್ಯಕ್ಕೆ ಬ್ರೇಕ್: ಊಟದ ತಕ್ಷಣ ಜೀರ್ಣಾಂಗಕ್ಕೆ ರಕ್ತಪರಿಚಲನೆ ಹೆಚ್ಚಾಗುವುದರಿಂದ ಸಹಜವಾಗಿಯೇ ಮಂಪರು ಹಾಗೂ ಆಲಸ್ಯ ಆವರಿಸುತ್ತದೆ. ಆದರೆ ಸ್ವಲ್ಪ ಸಮಯ ನಿಧಾನವಾಗಿ ನಡೆಯುವುದರಿಂದ ದೇಹದ ಜೀವಕೋಶಗಳಿಗೆ ಆಮ್ಲಜನಕ ಪೂರೈಕೆ ಹೆಚ್ಚಾಗಿ, ದೇಹವು ರೀಚಾರ್ಜ್ ಆಗುತ್ತದೆ ಮತ್ತು ಚೈತನ್ಯ ಸಿಗುತ್ತದೆ.
ಒತ್ತಡ ನಿವಾರಣೆ ಹಾಗೂ ಉತ್ತಮ ಮನಸ್ಥಿತಿ: ನಡಿಗೆಯಿಂದ ಕಾರ್ಟಿಸಾಲ್ ಮತ್ತು ಅಡ್ರಿನಾಲಿನ್ನಂತಹ ಒತ್ತಡದ ಹಾರ್ಮೋನುಗಳು ಕಡಿಮೆಯಾಗಿ, ಮನಸ್ಸಿಗೆ ಸಂತೋಷ ನೀಡುವ ‘ಎಂಡಾರ್ಫಿನ್’ ಹಾರ್ಮೋನ್ ಬಿಡುಗಡೆಯಾಗುತ್ತದೆ. ಜೊತೆಗೆ ರಕ್ತಪರಿಚಲನೆ ಸುಧಾರಿಸಿ, ದೇಹದಿಂದ ವಿಷಕಾರಿ ಅಂಶಗಳು ಹೊರಹೋಗಲು ನೆರವಾಗುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ನಡೆಯುವಾಗ ಈ ಮುನ್ನೆಚ್ಚರಿಕೆ ಇರಲಿ:
ಊಟದ ನಂತರ ಯಾವುದೇ ಕಾರಣಕ್ಕೂ ವೇಗವಾಗಿ ಅಥವಾ ಅತಿಯಾದ ಆಯಾಸವಾಗುವಂತೆ ಓಡಬಾರದು ಅಥವಾ ನಡೆಯಬಾರದು. ಇದರಿಂದ ಹೊಟ್ಟೆ ನೋವು ಅಥವಾ ಅಸ್ವಸ್ಥತೆ ಉಂಟಾಗಬಹುದು. ಕೇವಲ 10 ರಿಂದ 15 ನಿಮಿಷಗಳ ಕಾಲ ನಿಧಾನ ಗತಿಯಲ್ಲಿ, ಸರಳವಾಗಿ ಹೆಜ್ಜೆ ಹಾಕುವುದೇ ಆರೋಗ್ಯಕ್ಕೆ ಅತ್ಯಂತ ಉತ್ತಮ.










