ಟೋಕಿಯೊ: ಜಪಾನ್‌ನಲ್ಲಿ ಭಾನುವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಟೋಕಿಯೊ ಸೇರಿದಂತೆ ಈಶಾನ್ಯ ಮತ್ತು ಮಧ್ಯ ಜಪಾನ್‌ನ ಹಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಜಪಾನ್ ಹವಾಮಾನ ಸಂಸ್ಥೆ (JMA) ಭೂಕಂಪದ ತೀವ್ರತೆಯನ್ನು 5.9 ಎಂದು ದಾಖಲಿಸಿದ್ದು, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ 5.8 ತೀವ್ರತೆ ದಾಖಲಾಗಿದೆ.
ಭೂಕಂಪದ ಕೇಂದ್ರಬಿಂದು ಟೋಕಿಯೊದ ಈಶಾನ್ಯ ಭಾಗದಲ್ಲಿರುವ ಇಬರಾಕಿ ಪ್ರಾಂತ್ಯದಲ್ಲಿ, ಭೂಮಿಯಿಂದ ಸುಮಾರು 70 ಕಿಲೋಮೀಟರ್ ಆಳದಲ್ಲಿತ್ತು. ಭೂಕಂಪದ ಬಳಿಕ ಯಾವುದೇ ಸುನಾಮಿ ಅಪಾಯವಿಲ್ಲ ಎಂದು ಜಪಾನ್ ಹವಾಮಾನ ಸಂಸ್ಥೆ ಸ್ಪಷ್ಟಪಡಿಸಿದೆ.
20 ಮಂದಿಗೆ ಗಾಯ
ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆಯ (FDMA) ಮಾಹಿತಿ ಪ್ರಕಾರ ಇಬರಾಕಿ, ಚಿಬಾ ಮತ್ತು ಸೈತಾಮಾ ಪ್ರಾಂತ್ಯಗಳಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ.
ಟೋಕಿಯೊದ ಕೊಟೊ ವಾರ್ಡ್‌ನಲ್ಲಿ ಭೂಕಂಪದ ಪರಿಣಾಮ ಭೂಗತ ನೀರಿನ ಪೈಪ್ ಒಡೆದು ರಸ್ತೆಯಲ್ಲಿ ನೀರು ನಿಂತಿತ್ತು. ಮತ್ತೊಂದೆಡೆ, TEPCO ಪವರ್ ಗ್ರಿಡ್ ವ್ಯಾಪ್ತಿಯ ಸುಮಾರು 460 ಮನೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಬಳಿಕ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಯಿತು.
ರೈಲು ಸೇವೆಗಳಲ್ಲಿ ವ್ಯತ್ಯಯ

ಭೂಕಂಪದ ಪರಿಣಾಮ ಟೋಕಿಯೊ ಮತ್ತು ನರಿತಾ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್ ರೈಲುಗಳು ಹಾಗೂ ಕೆಲವು ಸ್ಥಳೀಯ ರೈಲು ಸೇವೆಗಳಲ್ಲಿ ವಿಳಂಬ ಉಂಟಾಯಿತು. ಆದರೆ ಈಸ್ಟ್ ಜಪಾನ್ ರೈಲ್ವೆಯ ಪ್ರಕಾರ ಶಿಂಕಾನ್ಸೆನ್ (ಬುಲೆಟ್ ಟ್ರೈನ್) ಸೇವೆಗಳು ಎಂದಿನಂತೆ ಮುಂದುವರಿದವು.
ಪ್ರದೇಶದ ಸುತ್ತಮುತ್ತಲಿರುವ ಸುಮಾರು ಒಂದು ಡಜನ್ ಪರಮಾಣು ವಿದ್ಯುತ್ ಸ್ಥಾವರಗಳು ಹಾಗೂ ಸಂಬಂಧಿತ ಘಟಕಗಳಲ್ಲಿ ಯಾವುದೇ ಅಸಹಜ ಪರಿಸ್ಥಿತಿ ಕಂಡುಬಂದಿಲ್ಲ ಎಂದು ಪರಮಾಣು ನಿಯಂತ್ರಣ ಪ್ರಾಧಿಕಾರ ತಿಳಿಸಿದೆ.
ಸರ್ಕಾರದಿಂದ ವಿಶೇಷ ಕಾರ್ಯಪಡೆ ರಚನೆ
ಜಪಾನ್ ಪ್ರಧಾನಿ ಸನಾಏ ತಕೈಚಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಭೂಕಂಪದಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹಾನಿಯ ಪ್ರಮಾಣವನ್ನು ಪರಿಶೀಲಿಸಲು ಸರ್ಕಾರ ವಿಶೇಷ ಕಾರ್ಯಪಡೆಯನ್ನು ರಚಿಸಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಜಪಾನ್‌ನ ದಕ್ಷಿಣ ಭಾಗದ ಕ್ಯೂಶು ದ್ವೀಪದ ಕುಮಾಮೊಟೊ ಪ್ರದೇಶದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆ ದುರಂತದಲ್ಲಿ 38 ಮಂದಿ ಮೃತಪಟ್ಟಿದ್ದು, ಸಾವಿರಾರು ಕಟ್ಟಡಗಳಿಗೆ ಹಾನಿಯಾಗಿತ್ತು.










