ಹೈದರಾಬಾದ್.ಆಗಸ್ಟ್.23: ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅನಿರೀಕ್ಷಿತ ಅವಘಡ ಸಂಭವಿಸಿದೆ. ಹೈದರಾಬಾದ್ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ವೇಳೆ ಸೌಂಡ್ ಮತ್ತು ಲೈಟಿಂಗ್ ವ್ಯವಸ್ಥೆಯ ಭಾರೀ ಸೆಟಪ್ವೊಂದು ಕುಸಿದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಯಶ್ ವೇದಿಕೆಯಲ್ಲಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಸಾವಿರಾರು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಆಗಮಿಸಿದ್ದರು. ಉತ್ತಮವಾಗಿ ಕಾರ್ಯಕ್ರಮ ವೀಕ್ಷಿಸಲು ಕೆಲ ವಿದ್ಯಾರ್ಥಿಗಳು ಸೌಂಡ್ ಹಾಗೂ ಲೈಟಿಂಗ್ ಉಪಕರಣಗಳನ್ನು ಅಳವಡಿಸಿದ್ದ ರಚನೆಯ ಮೇಲೆ ಹತ್ತಿದ್ದರು ಎನ್ನಲಾಗಿದೆ. ಈ ವೇಳೆ ಸೆಟಪ್ ಕುಸಿದು ಜನರತ್ತ ಬಿದ್ದಿದೆ ಎಂದು ವರದಿಗಳು ತಿಳಿಸಿವೆ.
ಘಟನೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಒಬ್ಬ ವಿದ್ಯಾರ್ಥಿನಿ ಕೆಲಕಾಲ ಪ್ರಜ್ಞೆ ಕಳೆದುಕೊಂಡಿದ್ದರು ಎನ್ನಲಾಗಿದ್ದು, ಗಾಯಗೊಂಡವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಭಾಷಣ ನಿಲ್ಲಿಸಿ ವಿದ್ಯಾರ್ಥಿಗಳ ಸುರಕ್ಷತೆ ವಿಚಾರಿಸಿದ ಯಶ್
ಅವಘಡ ಗಮನಕ್ಕೆ ಬರುತ್ತಿದ್ದಂತೆ ಯಶ್ ತಮ್ಮ ಭಾಷಣವನ್ನು ಕೆಲಕಾಲ ನಿಲ್ಲಿಸಿ, ಗಾಯಗೊಂಡ ವಿದ್ಯಾರ್ಥಿಗಳ ಪರಿಸ್ಥಿತಿ ಬಗ್ಗೆ ವಿಚಾರಿಸಿದರು. “ಎಲ್ಲರೂ ಸುರಕ್ಷಿತವಾಗಿದ್ದೀರಾ?” ಎಂದು ಅವರು ಕೇಳಿ, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ವೇಳೆ ಕೆಲವರು ಮತ್ತೊಮ್ಮೆ ಅಲ್ಲಿನ ರಚನೆಗಳ ಮೇಲೆ ಹತ್ತುತ್ತಿರುವುದನ್ನು ಗಮನಿಸಿದ ಯಶ್, ತಕ್ಷಣ ಕೆಳಗೆ ಇಳಿಯುವಂತೆ ಸೂಚಿಸಿದರು. ಬಳಿಕ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ತಮ್ಮ ಭಾಷಣವನ್ನು ಮುಂದುವರಿಸಿದರು.










