ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 21 : ಅಜ್ಜಿಗೆ ಫೋನ್ ಮಾಡಿದನೆಂಬ ಕಾರಣಕ್ಕಾಗಿ ವಿಧ್ಯಾರ್ಥಿಗೆ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ ಮನಸೋ ಇಚ್ಚೆ ಥಳಿಸಿದ್ದ ವೀಡಿಯೋ ಬಾರೀ ವೈರಲ್ ಆಗಿತ್ತು. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಇದೀಗ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಂಸ್ಕೃತ, ವೇದ ವೀರಶೈವಾಗಮ ಪಾಠ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ಅವರು ನಾಯಕನಹಟ್ಟಿ ಠಾಣೆಯಲ್ಲಿ ನಿನ್ನೆ (ಅಕ್ಟೋಬರ್. 20 ರಂದು) ರಾತ್ರಿ 11.00 ಗಂಟೆಗೆ ದೂರು ನೀಡಿದ್ದಾರೆ.
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ವೀರಶೈವ ಹಾಗೂ ಸಂಸ್ಕೃತ ವೇದ ವಸತಿ ಪಾಠಶಾಲೆಯಲ್ಲಿ ವ್ತಾಸಾಂಗ ಮಾಡುತ್ತಿದ್ದ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಗ್ರಾಮದ ವಿದ್ಯಾರ್ಥಿ ತರುಣ್ (9 ವರ್ಷ) ಬೇರೆಯವರ ನಂಬರ್ ನಿಂದ ಅವರ ಅಜ್ಜಿಗೆ ಫೋನ್ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕ ವೀರೇಶ್ ಅಮಾನವೀಯವಾಗಿ ಥಳುಸಿರುತ್ತಾನೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.




