Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಎಸ್ ಜೆ ಎಂ ಪಾಲಿಟೆಕ್ನಿಕ್ ನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ

---Advertisement---

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 01 : ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿನ ಮಕ್ಕಳು ಕನ್ನಡವನ್ನು ಕಡ್ಡಾಯವಾಗಿ ಕಲಿಯುವಂತಾದಾಗ ಮಾತ್ರ ನಮ್ಮ ನಡುವಿರುವ ಈಗಿನ ವಿದ್ಯಾರ್ಥಿಗಳಿಗೆ ಕನ್ನಡ ಅಭಿಮಾನ ಮೂಡಲು ಸಾಧ್ಯವಿದೆ. ಆಂಗ್ಲ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕನ್ನಡ ಕಠಿಣವಾಗುತ್ತಿದೆ ಮತ್ತು ಉದಾಸೀನ ಭಾವ ಭಾವನೆ ಬರಬಹುದು. ಅದಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಹೊತ್ತು ನೀಡಿದರೆ ಕನ್ನಡ ಬೆಳೆಯಲು ಸಾಧ್ಯ ಎಂದು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ನ ಉಪನ್ಯಾಸಕ ಹೆಚ್. ಜೆ ಗಂಗಾಧರ್ ಅವರು ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ನ ವತಿಯಿಂದ ಆಚರಿಸಿದ 71ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಮತ್ತೋರ್ವ ಉಪನ್ಯಾಸಕ ಟಿ .ಗಂಗಾಧರ್ ಅವರು ಮಾತನಾಡಿ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬ ಘೋಷವಾಕ್ಯವನ್ನು ರೂಪಿಸಿದವರು ರಾಹು ದೇಶಪಾಂಡೆ ಅವರು. ಹಿಂದಿನವರಿಗೆ ಎಂಥಾ ಭಾಷಾ ಪ್ರೇಮವಿತ್ತು, ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ಕನ್ನಡಕ್ಕಾಗಿ ತನು ಮನ ಧನ ಸಮರ್ಪಿಸಿ ಕೊಂಡಿದ್ದ ಅವರು ಪ್ರತಿ ಹಂತದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿದ್ದರು. ಅದನ್ನು ನಾವು ಬಳಸುವ ಮೂಲಕ ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ಪಾಲಿಟೆಕ್ನಿಕ್ ನ ಕಚೇರಿ ಅಧೀಕ್ಷಕ ಸಿ.ಎನ್. ಮೋಹನ್ ಮಾತನಾಡಿ ನಾವು ಮಕ್ಕಳಿಗೆ ಕನ್ನಡ ಓದುವಂತೆ ಉತ್ತೇಜನ ನೀಡಬೇಕು. ನಾಡಿನ ಪ್ರಪಂಚದ ವಿದ್ಯಮಾನಗಳು ಕೇವಲ ಪಠ್ಯದಲ್ಲಿ ಹಾಗೂ ಮೊಬೈಲ್ಗಳಲ್ಲಿ ಸಿಗುವುದಿಲ್ಲ .ಬದಲಿಗೆ ದಿನ ಪತ್ರಿಕೆ ,ಮಾಸಪತ್ರಿಕೆ ಓದುವ, ನಾಡಿನ ಕವಿ, ಸಾಹಿತಿಗಳ ಇತರ ಸಾಧಕರ ಗ್ರಂಥಗಳ ನಮ್ಮ ಅಧ್ಯಯನದ ಜೊತೆಗೆ ಮಕ್ಕಳಿಗೂ ಓದಿಸುವ ಪ್ರಯತ್ನವಾಗಬೇಕು. ದಿನ ಪತ್ರಿಕೆ ಓದುವ ಹವ್ಯಾಸ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನಾವು ಓದಿ ಮಕ್ಕಳಿಗೂ ರೂಢಿಮಾಡಿಸಬೇಕೆಂದು ಸಲಹೆ ನೀಡಿದರು.

ಗ್ರಂಥಪಾಲಕ ವೀರಯ್ಯ. ಎಂ, ಮಾತನಾಡಿ ಮೊಬೈಲ್ ಬಳಕೆ ಪರಿಣಾಮ ಅದು ಎಲ್ಲ ಹವ್ಯಾಸವನ್ನು ಕಸಿದುಕೊಂಡಿದೆ. ಅದರಲ್ಲಿ ಎಲ್ಲವೂ ಸಿಕ್ಕರೂ ಅದರಿಂದ ಜ್ಞಾಪಕ ಶಕ್ತಿ ಏಕಾಗ್ರತೆ ಸಿಗುವುದಿಲ್ಲ. ಬದಲಿಗೆ ಅದರಿಂದ ನೆನಪಿನ ಶಕ್ತಿ ಕುಂದುತ್ತಿದೆ ಎಂದರೆ ತಪ್ಪಿಲ್ಲ .ಬಹುತೇಕ ಎಲ್ಲ ಶಾಲಾ-ಕಾಲೇಜುಗಳಲ್ಲಿ ಚಿಕ್ಕ ಕೃತಿಗಳಿಂದ ಹಿಡಿದು ದೊಡ್ಡ ದೊಡ್ಡ ಗ್ರಂಥಗಳು ಲಭ್ಯವಿರುತ್ತವೆ. ಅವುಗಳನ್ನು ಅಭ್ಯಸಿಸುವಂತಹ ಕ್ರಮವಾಗಬೇಕೆಂದು ಹೇಳಿದರು.

ಬೋಧಕ ಸುರೇಶ್ ಕೋಣನವರು ಮಾತನಾಡಿ ಹಿಂದೆ ಹರಿದು ಹಂಚಿ ಹೋಗಿದ್ದ ಭಾಷಾವಾರು ಪ್ರಾಂತ್ಯಗಳನ್ನು ಒಗ್ಗೂಡಿಸಿ ಸಮಗ್ರ ಕರ್ನಾಟಕವನ್ನಾಗಿ ಮಾರ್ಪಡಿಸಿದ ಕೀರ್ತಿ ಅನೇಕ ಮಹಾನೀಯರುಗಳಿಗೆ ಸಲ್ಲುತ್ತದೆ ಎಂದು ಹೇಳಿದರು.

ಕಚೇರಿಸಿ ಸಿಬ್ಬಂದಿ ರುದ್ರಮೂರ್ತಿ ಎಂ.ಜೆ ಮಾತನಾಡಿ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು.ಅದು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ವೈವಿದ್ಯಮಯ ಭಾಷೆಯಾಗಿದೆ. ಅದನ್ನ ನಾವು ನಿತ್ಯ ಬಳಸದೇ ಹೋದಲ್ಲಿ ಅದು ಹಿನ್ನೆಲೆಗೆ ಸರಿಯುತ್ತದೆ. ನಾವು ಭಾಷೆಗೆ ಮಾತೃ ಸ್ಥಾನವನ್ನು ಕೊಟ್ಟಿದ್ದೇವೆ. ಅದಕ್ಕಾಗಿ ವಿಶೇಷ ಆದ್ಯತೆಯನ್ನು ನೀಡಬೇಕಾಗುತ್ತದೆ. ನಾವು ಆಚರಿಸುವ ಹಬ್ಬ, ಜಾತ್ರೆ ಇನ್ನಿತರ ವಿಶೇಷ ದಿನಗಳನ್ನ ಆಚರಿಸುವಂತೆ ಕನ್ನಡ ರಾಜ್ಯೋತ್ಸವವನ್ನೂ ಸಹ ನಮ್ಮ ಮನೆಯ ವಿಶೇಷ ಹಬ್ಬಗಳಲ್ಲಿ ಒಂದಾಗಿ ಆಚರಣೆ ಮಾಡುವಂತಾದಾಗ ಮಕ್ಕಳಿಗೆ ಭಾಷಾ ಪ್ರೇಮದ ಜೊತೆಗೆ ಓದುವ ಹವ್ಯಾಸವನ್ನು ರೂಢಿಸುವಂತಹ ಕ್ರಮವಾದಾಗ ಮಾತ್ರ ಅದು ಉಳಿಯಲು ಸಾಧ್ಯವಿದೆ ಎಂದರು.

ಮತ್ತೋರ್ವ ಸಿಬ್ಬಂದಿ ಪಿ. ಜಯಪ್ಪ ಮಾತನಾಡಿ ನುಡಿಯ ಜೊತೆಗೆ ನಡೆಯೂ ಆದಾಗ ಕನ್ನಡ ಉಳಿಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಸ್ ಜೆ ಎಮ್ ಕೈಗಾರಿಕಾ ತರಬೇತಿ ಕೇಂದ್ರದ ಬೋಧಕ ಚಲ್ಮೇಶ್ ಮಾತನಾಡಿ ನಮ್ಮ ಮುರುಘಾಮಠದ ಹಿಂದಿನ ಜಯದೇವ ಜಗದ್ಗುರುಗಳಿಂದಲೂ ಸಹ ಕರ್ನಾಟಕ ಏಕೀಕರಣಕ್ಕೆ ಪ್ರೋತ್ಸಾಹ ನೀಡಿದ ಐತಿಹ್ಯವಿದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಬಾಬು ಹಾಗೂ ಗುತ್ತಿಗೆದಾರ ಮಲ್ಲೇಶ್ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now