ದಾವಣಗೆರೆ,ಅಕ್ಟೋಬರ್. 07 : ಪ್ರತಿಯೊಬ್ಬರ ಹೃದಯ ಮಂದಿರದಲ್ಲಿ ರಾಮನ ಆದರ್ಶಗಳು ಮನೆ ಮಾಡಿದ್ದು ರಾಮನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ದಾವಣಗೆರೆ ಲೋಕಸಭಾ ಸದಸ್ಯೆ ಡಾ.ಪ್ರಭ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಅಕ್ಟೋಬರ್ 07 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಗುಡಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಫಾಟಿಸಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ರಾಮಾಯಾಣದಲ್ಲಿ ರಾಮ, ಸೀತೆ, ಲಕ್ಷಣ ಮತ್ತು ಭರತ ಸೇರಿದಂತೆ ಮಂಡೋದರಿ, ಶಬರಿ ಮತ್ತು ಹನುಮಂತನ ಪಾತ್ರಗಳನ್ನು ಕೇಳಿದ್ದೇವೆ. ಪ್ರತಿಯೊಂದು ಪಾತ್ರದ ಬಗ್ಗೆ ತಿಳಿದುಕೊಂಡಿದ್ದೇವೆ. ಪ್ರತಿಯೊಂದು ಪಾತ್ರದ ಬಗ್ಗೆ ತಿಳಿದುಕೊಂಡು ಅವರಂತೆ ಆದರ್ಶವಾಗಿ ಬದುಕಬೇಕು ಎಂದರು.
ರಾಮನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ರಾಮನನ್ನು ಮಾರ್ಯಾದೆ ಪುರುಷ ಎಂದು ಕರೆಯುತ್ತಿದ್ದರು, ರಾಮನು ಕಾಡಿಗೆ ತೆರಳಿದ ಸಂದರ್ಭದಲ್ಲಿ ಭರತ ರಾಮನ ಪಾದುಕೆಗಳನ್ನು ತಂದು ಸಿಂಹಾಸನದ ಮೇಲೆ ಇಟ್ಟು ರಾಮನ ಆದರ್ಶಗಳನ್ನು ಅಳವಡಿಸಿಕೊಂಡು ರಾಜ್ಯಭಾರ ಮಾಡುತ್ತಾನೆ. ವನವಾಸದ ನಂತರ ಪುನಃ ಪಟ್ಟಾಭಿಷೇಕ ಮಾಡಿದರು. ಪರಸ್ಪರ ಹಿರಿಯರಿಗೆ ಗೌರವ ಸಹೋದರ ಬ್ರಾತೃತ್ವ ಪರಸ್ಪರ ಸತಿಪತಿ ಗೌರವಗಳನ್ನು ಕೊಡುವುದರ ಮೂಲಕ ಅವರು ಇತರರಿಗೆ ಮಾದರಿಯಾಗಿದ್ದಾರೆ. ನಾವು ಯಾವ ರೀತಿಯ ಆಡಳಿತವನ್ನು ನೀಡಬೇಕೆಂಬುದು ನಮ್ಮೆಲರಿಗೂ ಅವರ ರಾಜ್ಯ ಮಾದರಿಯಾಗಿದೆ ಎಂದರು.
ರಾಮಾಯಾಣ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯು ಅಧ್ಯಯನಗಳು ನಡೆದಿವೆ. ರಾಮಾಯಾಣವನ್ನು ಬೇರೆ ಬೇರೆ ಕವಿಗಳು ತಮ್ಮ ದೃಷ್ಟಿಕೋನದ ತಕ್ಕಂತೆ ಬರೆದಿದ್ದಾರೆ. ೪೦ ವರ್ಷಗಳ ಹಿಂದೆ ದೂರದರ್ಶನದಲ್ಲಿ ರಾಮಾಯಾಣ ಪ್ರಸಾರವಾಗುತಿತ್ತು, ಆ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಟಿವಿ ಇಲ್ಲವೆಂದರೂ ಸಹ ಪಕ್ಕದ ಮನೆಯಲ್ಲಿ ರಾಮಾಯಾಣವನ್ನು ವೀಕ್ಷಣೆ ಮಾಡುತ್ತಿದ್ದೇವು. ಅಷ್ಟೇ ಅಲ್ಲ ರಾಮಾಯಾಣ ಪ್ರಸಾರದ ಸಮಯದಲ್ಲಿ ರಸ್ತೆಗಳು ಎಲ್ಲಾ ಖಾಲಿ ಖಾಲಿ ಆಗಿರುತ್ತಿದ್ದವು ಎಂದರೆ ಆ ಪಾತ್ರಗಳು ನಮಗೆ ಅಷ್ಟು ಪ್ರಮುಖವಾಗಿದ್ದವು ಎಂದರು.
ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಸ್. ಬಸವಂತಪ್ಪ ನವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ವಾಲ್ಮೀಕಿ ಮಹರ್ಷಿಗಳು ರಾಮಾಯಾಣ ಮಹಾಕಾವ್ಯವನ್ನು ಕೊಟ್ಟಿದ್ದು ಅದು ಅದರದೇ ಆದತಂಹ ಛಾಪನ್ನು ಮೂಡಿಸಿದೆ. ವಾಲ್ಮೀಕಿ ನೀಡಿರುವ ಸಂದೇಶ ಇಡೀ ದೇಶದಲ್ಲಿ ಸಾಮರಸ್ಯ ಸಾರುವಂತಹದಾಗಿದೆ . ವಾಲ್ಮೀಕಿ ರಾಮಾಯಾಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ನಾವು ವಾಲ್ಮೀಕಿಗೆ ಕೊಡುವ ಗೌರವವಾಗಿದೆ. ಸರ್ಕಾರ ವಾಲ್ಮೀಕಿ ಜನಾಂಗಗಕ್ಕೆ ಅನೇಕ ಯೋಜನೆಗಳನ್ನು ಕೊಟ್ಟಿದೆ, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಉಪನ್ಯಾಸ ನೀಡಿದ ಡಾ.ದಾದಾಪಿರ್ ನವಿಲೇಹಾಳ್ ರವರು ಕವಿಗಳು ಈ ಜಗತ್ತಿನ ಅನಧಿಕೃತ ಶಾಸಕರಾಗಿರುತ್ತಾರೆ ಎಂದು ಆಂಗ್ಲ ಕವಿ ಹೇಳಿದ್ದಾನೆ. ಪ್ರಪಂಚದಲ್ಲಿ ಏಳು ಮಹಾಕಾವ್ಯಗಳಿದ್ದು ಅವುಗಳಲ್ಲಿ ಸಂಸ್ಕೃತದ ಎರಡು ಮಹಾಕಾವ್ಯಗಳು ನಮ್ಮ ಭಾರತದವು ಅವುಗಳೆಂದರೆ ವಾಲ್ಮೀಕಿ ಶ್ರೀ ರಾಮಾಯಾಣ ಮತ್ತು ವ್ಯಾಸ ಕವಿ ರಚಿಸಿದ ಮಹಾಭಾರತ ಸೇರಿವೆ. ನಂತರ ಅನೇಕರು ರಾಮಾಯಾಣವನ್ನು ರಚಿಸಿದರು. ಆದರೆ ವಾಲ್ಮೀಕಿ ರಾಮಾಯಾಣದಂತಹ ಮಹಾಕಾವ್ಯ ಇನ್ನೊಂದಿಲ್ಲ ಎಂದರು.
ವಾಲ್ಮೀಕಿ ಯವರ ಮೂಲ ಹೆಸರು ರತ್ನಕರ ಅದರ ಅರ್ಥ ಸಮುದ್ರವಾಗಿದೆ. ಅಂದರೆ ಸಮುದ್ರದಲ್ಲಿರುವ ಮುತ್ತು ರತ್ನ. ವಾಲ್ಮೀಕಿ ರಾಮಾಯಾಣದಲ್ಲಿ ನೈತಿಕ ಮೌಲ್ಯಗಳನ್ನೊಳಗೊಂಡ ಮಹಾಕಾವ್ಯ ಇದಾಗಿದೆ. ನಾರದರಿಂದ ಪ್ರಭಾವಿತರಾದ ವಾಲ್ಮೀಕಿ ರಾಮಾಯಾಣವನ್ನು ರಚಿಸುತ್ತಾರೆ. ರಾಮಾಯಾಣವನ್ನು ಅಕ್ಷರಸ್ಥರು, ಅನಕ್ಷರಸ್ಥರು ಎಲ್ಲರೂ ಆಲಿಸುವಂತಹ ಪಾತ್ರಗಳು, ಚಟುವಟಿಗಳು ಪ್ರಭಾವಿತರಾಗುವಂತಹ ಘಟನಾವಳಿಗಳು ಇವೆ. ರಾಮಾಯಾಣದಲ್ಲಿ ರಾಜಕೀಯ ದೃಷ್ಠಿಕೊನಗಳನ್ನು ನೀಡುತ್ತದೆ. ರಾಮಾಯಾಣದಲ್ಲಿ ರಾಜನ ಆಶಯಗಳು ಹೇಗಿರಬೇಕು, ಆಡಳಿತ ನೀತಿಗಳು ಹೇಗಿರಬೇಕು, ರಾಜರು ಹೇಗೆ ಜನರಿಗೆ ಮಾದರಿಯಾಗಿರಬೇಕು ಎಂಬ ಎಲ್ಲ ಸೂಚನೆಗಳನ್ನು ನೀಡುತ್ತಾರೆ ಎಂದರು.
ರಾಮಾಯಾಣ ಒಂದು ಮಹಾಕಾವ್ಯ, ಅದ್ದರಿಂದ ಪ್ರತಿಯೊಬ್ಬರು ಈ ಮಹಾಕಾವ್ಯವನ್ನು ಓದಬೇಕು. ನಂತರ ರಾಮಾಯಾಣದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೊಣ ಎಂದರು.
ಮಕ್ಕಳು, ತಂದೆ ತಾಯಿಗಳಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ನಾವು ಇಲ್ಲಿ ಕಲಿಯಬಹುದು. ಇಂದು ಕೌಟಂಬಿಕ ಮೌಲ್ಯಗಳು ನಾಶವಾಗುತ್ತಿರುವ ಸಂದರ್ಭದಲ್ಲಿ ರಾಮಾಯಾಣ ನಮಗೆ ಮಾದರಿಯಾಗಿದೆ. ಕೌಸಲ್ಯ ಮಹಾತಾಯಿಯು ತನ್ನ ಮಗನಾದ ರಾಮನು ಕಾಡಿಗೆ ಹೊಗುವುದು ಮೊದಲೇ ತಿಳಿದು ಇಂದು ನನ್ನ ಮಗನ ಕಟ್ಟಕಡೆಯ ಊಟ ಅರಮನೆಯಲ್ಲಿ ಮಾಡುತ್ತಾನೆ. ಮುಂದೆ ಕಾಡಿನಲ್ಲಿ ನೀರು ಮತ್ತು ಊಟಕ್ಕೆ ತೊಂದರೆ ಪಡುತ್ತಾನೆ ಎಂದು, ರಾಮನನ್ನು ಕುಳಿತುಕೋ ಊಟ ಮಾಡು ಎಂದು ಹೇಳಿ ಆಶೀರ್ವಾದ ಮಾಡಿ ಕಳುಹಿಸುತ್ತಾಳೆ. ಇಂತಹ ಸಣ್ಣ ವಿಚಾರಗಳನ್ನು ದೊಡ್ಡ ವಿಚಾರಗಳನ್ನಾಗಿ ಹೇಳಲು ವಾಲ್ಮೀಕಿಯಂತಹ ಮಹರ್ಷಿಗಳಿಂದ ಮಾತ್ರ ಸಾಧ್ಯ, ಇಂದು ನಾವು ತಂದೆ ತಾಯಿ ಭಕ್ತಿ, ಸತ್ಯ , ನೈತಿಕ ಮೌಲ್ಯಗಳನ್ನು ರಾಮನಿಂದ ಕಲಿಯಬೇಕಾಗಿದೆ. ರಾಮಾಯಾಣ ಪುಸ್ತಕದ ವಸ್ತುವಾಗಿ ಉಳಿದಿಲ್ಲ ಬದುಕಿನ ಭಾಗವಾಗಿದೆ ಎಂದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರಾದ ಎನ್.ಜಯದೇವನಾಯ್ಕ್ , ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಮನೂರು ಟಿ.ಬಸವರಾಜ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್, ಅಪರ ಜಿಲ್ಲಾಧಿಕಾರಿ ಎಸ್.ಶಿವಾನಂದ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ.ನವೀನ್ ಮಠದ್ , ಹಾಗೂ ಇತರರು ಉಪಸ್ಥತರಿದ್ದರು.
ಇದೇ ವೇಳೆ ಎಸ್.ಎಸ್ ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಿದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ವಾಲ್ಮೀಕಿ ಮಹರ್ಷಿ ಗಳ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳೊಂದಿಗೆ ಬೆಳ್ಳಿರಥದಲ್ಲಿ ಮೆರವಣಿಗೆ ಏರ್ಪಡಿಸಲಾಗಿತ್ತು.

