ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 23 : ಹಿಂದಿನ ತಲೆಮಾರುಗಳ ತ್ಯಾಗ, ಹೋರಾಟ, ಸೇವಾ ತತ್ಪರತೆಯನ್ನು ಸ್ಮರಿಸಿ ಅವರ ಆದರ್ಶಗಳನ್ನು ಪಾಲಿಸುವ ಅಗತ್ಯವಿದೆ ಎಂದು ವಿಶ್ರಾಂತ ಜಂಟಿ ನಿರ್ದೇಶಕ ಪ್ರೊ.ಟಿ.ವಿ.ಸುರೇಶ್‍ಗುಪ್ತ ಹೇಳಿದರು.

ಆರ್ಯವೈಶ್ಯ ಸಂಘ, ಆರ್ಯವೈಶ್ಯ ಸಾಹಿತ್ಯ ಪರಿಷತ್ತು, ವಾಸವಿ ಮಹಿಳಾ ಸಂಘದಿಂದ ಚಿತ್ರದುರ್ಗದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ವಾಸವಿ ಜಯಂತಿ ಸಪ್ತೋತ್ಸವದ ಮೂರನೆ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಾತಿನಿಧಿಕವಾಗಿ ಹತ್ತು ಮಂದಿ ವಣಿಜಕುಲದ ಮಹನೀಯರನ್ನು ಚಿತ್ರ ಸಮೇತ ಕಿರುಪರಿಚಯ ಹಾಡಿನೊಂದಿಗೆ ಪ್ರಸ್ತುತ ಪಡಿಸಲಾಗಿದೆ. ನಮ್ಮ ಸಮುದಾಯದಲ್ಲಿ ಸಾಹಿತಿಗಳು, ಸ್ವಾತಂತ್ರ ಹೋರಾಟಗಾರರು ಮಹಾದಾನಿಗಳು ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವವರನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.
ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಸರ್ವದಾ ಸುರೇಶ್ ಗುಪ್ತ ಮಾತನಾಡಿ ಜನಪ್ರಿಯವಾದ ಹರಟೆ ಕಾರ್ಯಕ್ರಮದಂತೆ ಈ ದಿನ ಹಬ್ಬಗಳು ಅಂದು ಇಂದು ವಿಷಯ ಕುರಿತು ಏರ್ಪಡಿಸಲಾಗಿದ್ದ ಸಂವಾದ ಗೋಷ್ಠಿಯಲ್ಲಿ ಆರು ಗೃಹಲಕ್ಷ್ಮಿಯರು ಮಂಡಿಸಿದ ವಿಚಾರದಲ್ಲಿ ಜೆ.ಆರ್.ಶಿವಕುಮಾರ್ ರಚಿತವಾದ ಏಕತಾಗೀತೆಗೆ ನಮ್ಮ ಗಾಯಕಿಯರು ಧ್ವನಿಗೂಡಿಸಿದ್ದು, ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಶ್ರೀನಿವಾಸಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಎಚ್.ಮಂಜುನಾಥ್, ಎನ್.ಶಶಿಧರಗುಪ್ತ ಇವರುಗಳು ವೇದಿಕೆಯಲ್ಲಿದ್ದರು. ಮಹಿಳೆಯರಿಂದ ಕೋಲಾಟ, ಹಳೆ ಚಿತ್ರಗೀತೆಗಳ ಜಾಮಿಂಗ್ ಅನೇಕ ಹೃನ್ಮನ ಸೆಳೆಯಿತು. ಸ್ವರ್ಣರಾಜ್ ಪ್ರಾರ್ಥಿಸಿದರು. ಸುಧಾ ಮಂಜುನಾಥ್ ಸ್ವಾಗತಿಸಿದರು. ಜೆ.ಆರ್.ಶಿವಕುಮಾರ್ ವಂದಿಸಿದರು. ದೇವಿಗೆ ಮಂಗಳಾರತಿ ನಂತರ ಪ್ರಸಾದ ವಿನಿಯೋಗಿಸಲಾಯಿತು.


















