ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 27 : ರಾಜ್ಯದಲ್ಲಿ ಪದವಿ ಕಾಲೇಜುಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಈ ಶೈಕ್ಷಣಿಕ ಗೊಂದಲವನ್ನು ಪರಿಹರಿಸುವಂತೆ ಆಗ್ರಹಿಸಿ ಇಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜು, ಸರ್ಕಾರಿ ಆರ್ಟ್ಸ್ (ಸ್ವಾಯತ್ತ) ಕಾಲೇಜು ಹಾಗೂ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪದವಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಆಗ್ರಹಿಸಿ ಇಂದು ರಾಜ್ಯದಾದ್ಯಂತ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಪದವಿ ತರಗತಿಗಳ ಬಹಿಷ್ಕಾರಕ್ಕೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜಿನ ಎದುರುಗಡೆ ಸೇರಿದ ವಿದ್ಯಾರ್ಥಿಗಳು ಗೇಟ್ ಹಾಕಿ, ಗೇಟುಗಳ ಮೇಲೆ ತಮ್ಮ ಬೇಡಿಕೆಗಳ ಫಲಕಗಳನ್ನಿಟ್ಟು ಪ್ರತಿಭಟನೆ ನಡೆಸಿದರು. ಈಗಾಗಲೇ ಖಾಸಗಿ ಕಾಲೇಜುಗಳಲ್ಲಿ ತರಗತಿಗಳು ಸರಾಗವಾಗಿ ನಡೆಯುತ್ತಿದ್ದು ಆಂತರಿಕ ಪರೀಕ್ಷೆಗಳನ್ನು ಮುಗಿಸಿ ಅಲ್ಲಿನ ಸೆಮಿಸ್ಟರ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಆದರೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಪ್ರತಿದಿನ 30-40 ಕಿಲೋ ಮೀಟರ್ ಪ್ರಯಾಣ ಮಾಡಿ ಬಂದು ಕೇವಲ ಖಾಲಿ ಬೋರ್ಡ್ ಹಾಗೂ ಗೋಡೆ ನೋಡಿ ಮನೆಗೆ ಮರಳುತ್ತಿದ್ದಾರೆ. ಸಮಸ್ಯೆಗೆ ಸರಿಯಾದ ಪರಿಹಾರ ಒದಗಿಸದೆ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗುತ್ತಿರುವ ಮತ್ತು ಸರ್ಕಾರಿ ಕಾಲೇಜು ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಭೀಕರ ತಾರತಮ್ಯ ಸೃಷ್ಟಿಸಿರುವ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ನ ರಾಜ್ಯ ಕಚೇರಿ ಕಾರ್ಯದರ್ಶಿಗಳಾದ ಮಹಾಂತೇಶ ಬಿಳೂರ್ ಮಾತನಾಡಿ, 2025-26ರ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ದಾವಣಗೆರೆ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿವೆ. ಹೀಗಾದಲ್ಲಿ, ಇನ್ನೂ ಸರಿಯಾಗಿ ತರಗತಿಗಳೇ ಆರಂಭವಾಗಿರದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವಾಗುತ್ತದೆ. ಆದ್ದರಿಂದ ಸರ್ಕಾರವು ಕೂಡಲೇ ಪರೀಕ್ಷೆಗಳನ್ನು ಮುಂದೂಡಬೇಕು ಮತ್ತು ಅವಶ್ಯಕ ತರಗತಿಗಳನ್ನು ನಡೆಸಿದ ನಂತರವಷ್ಟೇ ರಾಜ್ಯದಲ್ಲಿ ಪದವಿ ಪರೀಕ್ಷೆಗಳನ್ನು ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಹೋರಾಟದ ಮುಂದಿನ ನಡೆಯಾಗಿ, ತರಗತಿ ನಡೆಸದೆ ಪರೀಕ್ಷೆ ಬೇಡ ಎಂಬ ಘೋಷ್ ವಾಕ್ಯದೊಂದಿಗೆ ರಾಜ್ಯದಾದ್ಯಂತ ಸಂಘರ್ಷ ನಡೆಸಲು ವಿದ್ಯಾರ್ಥಿಗಳು ಇಂದು ತರಗತಿ ಬಹಿಷ್ಕಾರದ ಹಿನ್ನಲೆಯಲ್ಲಿ ತೀರ್ಮಾನಿಸಲಾಯಿತು. ಅತಿಥಿ ಉಪನ್ಯಾಸಕರಿಲ್ಲದೇ, ಒಂದೂ ತರಗತಿ ನಡೆಯದಿದ್ದರೂ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಮತ್ತು ಪರೀಕ್ಷಾ ಶುಲ್ಕದ ಸುತ್ತೋಲೆ ಹೊರಡಿಸಿರುವ ವಿವಿಗಳ ಧೋರಣೆ ಖಂಡನೀಯ. ಸರ್ಕಾರಿ ವಿವಿಗಳು ಖಾಸಗಿ ಪದವಿ ಕಾಲೇಜುಗಳಿಗಾಗಿ ಮಾತ್ರ ಇರುವುದೇ ಎಂದು ಪ್ರಶ್ನೆ ಮಾಡಿದರು.
ಅವಶ್ಯಕ ತರಗತಿಗಳನ್ನು ನಡೆಸದೆ ಪರೀಕ್ಷೆ ನಡೆಸಬಾರದು ಮತ್ತು ಈಗ ಘೋಷಣೆಯಾಗಿರುವ ಸರ್ಕಾರಿ ವಿಶ್ವವಿದ್ಯಾಲಯಗಳ ಪರೀಕ್ಷಾ ದಿನಾಂಕಗಳನ್ನು ಮುಂದೂಡಬೇಕೆಂಬ ಬೇಡಿಕೆಯೊಂದಿಗೆ ಪದವಿ ವಿದ್ಯಾರ್ಥಿಗಳ ತರಗತಿ ಬಹಿಷ್ಕಾರ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸಲೀಂ, ಸುದೀಪ್, ಮನು, ವೆಂಕಟೇಶ, ನಿತೀಶ, ಸಹನಾ, ಪುಷ್ಮಾ, ಅಂಜುಮ್, ಸುಹಾನಾ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

