Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೇಶದ ರೈತರಿಗೆ ಸಿಹಿಸುದ್ದಿ : ಹಿಂಗಾರಿನ 6 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

---Advertisement---

ದೆಹಲಿ: ದೇಶದ ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರ ದೊಡ್ಡ ಸಿಹಿಸುದ್ದಿ ನೀಡಿದ್ದು, 2027-28ನೇ ಸಾಲಿನ ಮಾರುಕಟ್ಟೆ ಹಂಗಾಮಿನ ಎಲ್ಲಾ ಕಡ್ಡಾಯ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಹೆಚ್ಚಿಸಲು ಮಹತ್ವದ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಅಧಿಕೃತ ಅನುಮೋದನೆ ದೊರೆತಿದೆ. ಗೋಧಿ ಹಾಗೂ ಪ್ರಮುಖ ಬೇಳೆಕಾಳುಗಳ ಬೆಂಬಲ ಬೆಲೆಯನ್ನು ಪರಿಷ್ಕರಿಸಲಾಗಿದ್ದು, ರೈತರ ಆದಾಯ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ.

ಹೊಸ ದರಗಳ ಪ್ರಕಾರ, ಗೋಧಿ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 2,610 ರೂಪಾಯಿಗೆ ಹಾಗೂ ಕಡಲೆ ಬೆಂಬಲ ಬೆಲೆಯನ್ನು 5,958 ರೂಪಾಯಿಗೆ ಏರಿಕೆ ಮಾಡಲಾಗಿದೆ. ಮಸೂರ್ ಬೇಳೆಯ ದರವನ್ನು ಕ್ವಿಂಟಾಲ್‌ಗೆ 390 ರೂಪಾಯಿ ಹೆಚ್ಚಿಸಲಾಗಿದ್ದು, ಹೊಸ ದರ 7,390 ರೂಪಾಯಿಗೆ ತಲುಪಿದೆ. ಸಾಸಿವೆ ಮತ್ತು ರೇಪ್‌ಸೀಡ್ ಬೆಂಬಲ ಬೆಲೆ ಕ್ವಿಂಟಾಲ್‌ಗೆ 413 ರೂಪಾಯಿ ಏರಿಕೆಯಾಗಿ 6,613 ರೂಪಾಯಿಗೆ ನಿಗದಿಯಾಗಿದೆ. ಇನ್ನು ಕುಸುಬೆ ಬೆಳೆಗೆ ಅತ್ಯಧಿಕವಾಗಿ ಕ್ವಿಂಟಾಲ್‌ಗೆ 675 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ನೂತನ ಬೆಲೆ 7,215 ರೂಪಾಯಿಯಾಗಿದೆ. ಬಾರ್ಲಿ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 136 ರೂಪಾಯಿ ಹೆಚ್ಚಿಸುವುದರೊಂದಿಗೆ 2,286 ರೂಪಾಯಿಗೆ ನಿಗದಿಪಡಿಸಲಾಗಿದೆ.

ಇದರೊಂದಿಗೆ ‘ಪಿಎಂ ಧಾರಾ’ ಯೋಜನೆಗೆ 1,86,405 ಕೋಟಿ ರೂಪಾಯಿ ಅನುದಾನ ನೀಡಲು ಸಂಪುಟ ಅನುಮೋದನೆ ನೀಡಿದೆ. 2026-27ನೇ ಸಾಲಿನಲ್ಲಿ ಗೋಧಿಯ ಬೆಂಬಲ ಬೆಲೆ ಕ್ವಿಂಟಾಲ್‌ಗೆ 2,585 ರೂಪಾಯಿ ಇತ್ತು, ಈಗ 2027-28ನೇ ಸಾಲಿಗೆ 25 ರೂಪಾಯಿ ಹೆಚ್ಚಿಸಿ 2,610 ರೂಪಾಯಿಗೆ ನಿಗದಿಪಡಿಸಲಾಗಿದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಶಿಫಾರಸು, ಉತ್ಪಾದನಾ ವೆಚ್ಚ, ಎಲ್‌ನಿನೋ ಪ್ರಭಾವ ಹಾಗೂ ಜಾಗತಿಕ ಮತ್ತು ದೇಶೀಯ ಮಾರುಕಟ್ಟೆ ಪರಿಸ್ಥಿತಿಗಳನ್ನು ಪರಿಗಣಿಸಿ ಕೃಷಿ ಸಚಿವಾಲಯ ನೀಡಿದ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. 2026-27ನೇ ಸಾಲಿನಲ್ಲಿ ದೇಶದಲ್ಲಿ 121 ಮಿಲಿಯನ್ ಟನ್ ಗೋಧಿ ಉತ್ಪಾದನೆಯ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.

ಮತ್ತೊಂದೆಡೆ, ಕರ್ನಾಟಕ, ಉತ್ತರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ 2026-27ರ ಖಾರಿಫ್ ಹಂಗಾಮಿನ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿಸಲು ಬರೋಬ್ಬರಿ 5,547.99 ಕೋಟಿ ರೂಪಾಯಿಗಳ ಸಂಗ್ರಹಣೆಗೆ ಹಸಿರು ನಿಶಾನೆ ತೋರಲಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಬೇಳೆಕಾಳು ಮತ್ತು ಎಣ್ಣೆಕಾಳು ಬೆಳೆಗಾರರನ್ನು ರಕ್ಷಿಸಿ, ಅವರಿಗೆ ಲಾಭದಾಯಕ ಬೆಲೆ ಸಿಗುವಂತೆ ಮಾಡುವುದು ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ. ಉತ್ತರ ಪ್ರದೇಶದಲ್ಲಿ 3,992.57 ಕೋಟಿ ರೂಪಾಯಿ ಮೌಲ್ಯದ ತೊಗರಿ ಮತ್ತು ಹೆಸರುಕಾಳು ಹಾಗೂ ತೆಲಂಗಾಣದಲ್ಲಿ 448.42 ಕೋಟಿ ರೂಪಾಯಿ ಮೌಲ್ಯದ ಸೋಯಾಬಿನ್ ಮತ್ತು ಹೆಸರುಕಾಳು ಖರೀದಿಗೆ ಅನುಮೋದನೆ ದೊರೆತಿದೆ. ಬೆಂಬಲ ಬೆಲೆ ಹೆಚ್ಚಳಕ್ಕೆ ರೈತ ಸಂಘಟನೆಗಳು ಹಲವು ದಿನಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಅನ್ನದಾತರಲ್ಲಿ ಸಂತಸ ಮೂಡಿಸಿದೆ.

Join WhatsApp

Join Now

Join Telegram

Join Now