Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ಅಪಘಾತಕ್ಕೊಳಗಾದವರಿಗೆ ‘ಗೋಲ್ಡನ್ ಅವರ್’ನಲ್ಲಿ ₹1.5 ಲಕ್ಷವರೆಗೆ ಉಚಿತ ಚಿಕಿತ್ಸೆ: ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಸೂಚನೆ

---Advertisement---

ದಾವಣಗೆರೆ : ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಯುವ ಹಾಗೂ ಸುಗಮ ವಾಹನ ಸಂಚಾರಕ್ಕೆ ಸೂಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ‘ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶೀಘ್ರ ಅನುಷ್ಠಾನ, ಸುಗಮ ಸಂಚಾರಕ್ಕೆ ಎದುರಾಗಿರುವ ಅಡೆತಡೆಗಳ ನಿವಾರಣೆ ಹಾಗೂ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ದಾವಣಗೆರೆ ಯಿಂದ ಹೊನ್ನಾಳಿ ರಸ್ತೆ ಹದಗೆಟ್ಟಿದ್ದು 15 ದಿನಗಳಲ್ಲಿ ರಸ್ತೆ ದುರಸ್ತಿ ಅಥವಾ ಹೊಸದಾಗಿ ರಸ್ತೆ ಮಾಡಿಸಲು ಕ್ರಮವಹಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ಎನ್‌ಹೆಚ್-48 ರ (257+600 ಚೈನೇಜ್) ಎಸ್‌ಎಸ್‌ ಹೈಟೆಕ್ ಆಸ್ಪತ್ರೆಯ ಮುಖ್ಯ ದ್ವಾರದ ಬಳಿ ಇರುವ ಅಂಡರ್ ಪಾಸ್‌ನಲ್ಲಿ ವಾಹನ ದಟ್ಟಣೆ ಹಾಗೂ ಆಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಜೊತೆಗೆ ಕೆಎಸ್‍ಆರ್‌ಟಿಸಿ ಡಿಪೋ ರಾಮನಗರದಲ್ಲಿರುವುದರಿಂದ ವಾಹನ ದಟ್ಟಣೆ ತಪ್ಪಿಸಲು ಈ ಸೇತುವೆಯನ್ನು ವಿಸ್ತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮವಹಿಸಬೇಕು ಎಂದು ತಿಳಿಸಿದರು.

ಎನ್‌ಹೆಚ್-48 ರ (265+300 ಚೈನೇಜ್) ಹೊಸ ಕುಂದವಾಡ ಗ್ರಾಮದ ಬಳಿಯ ಅಂಡರ್ ಪಾಸ್ ಸೇತುವೆ ಹಾಗೂ ಎರಡೂ ಬದಿಯ ಸರ್ವಿಸ್ ರಸ್ತೆ ಕಾಮಗಾರಿಯನ್ನು ಡಿಸೆಂಬರ್‌ ಮಾಹೆಯೊಳಗೆ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು, ಹರಿಹರ ತಾಲೂಕು ಹರಗನಹಳ್ಳಿ ಗ್ರಾಮದ ಬಳಿ ಎನ್‌ಹೆಚ್-48 ರ (276+200 ಚೈನೇಜ್) LHS ಅಂಡರ್‌ಪಾಸ್ ಬಾಟಲ್ ನೆಕ್ ಮಾದರಿಯಲ್ಲಿದ್ದು, ರಾತ್ರಿ ವೇಳೆ ಅಪಘಾತ ವಲಯವಾಗಿದ್ದು ಅದನ್ನು  ತಡೆಯಲು ಅಗಲಗೊಳಿಸಬೇಕು , ಎನ್‌ಹೆಚ್-48 ರ (244+000 ಚೈನೇಜ್) ಆನಗೋಡು ಗ್ರಾಮದ ಬಳಿ ಧಾಬಾ/ಹೋಟೆಲ್‌ಗಳಿಂದ ವಾಹನಗಳು ಏಕಾಏಕಿ ಹೆದ್ದಾರಿಗೆ ತಿರುವು ಪಡೆಯುವುದನ್ನು ತಡೆಯಲು ಸಂಪೂರ್ಣವಾಗಿ ಗ್ರಿಲ್ ಅಳವಡಿಸಬೇಕು ಎಂದರು.

ಹೆಬ್ಬಾಳು ಟೋಲ್‌ಗೇಟ್‌ನಲ್ಲಿ ಎಎನ್‌ಪಿಆರ್ (ANPR) ನಂಬರ್ ಪ್ಲೇಟ್ ನೋಂದಣಿ ಸಿ.ಸಿ ಕ್ಯಾಮೆರಾ, ಉತ್ತಮ ಗುಣಮಟ್ಟದ ಪಿಟಿಝೆಡ್ (PTZ) ಕ್ಯಾಮೆರಾ, ದೀಪಗಳ ವ್ಯವಸ್ಥೆ ಹಾಗೂ ದ್ವಿಚಕ್ರವಾಹನ ಮಾರ್ಗದಲ್ಲಿ ಸಿಸಿಟಿವಿ ಅಳವಡಿಸಿ ಜಿಲ್ಲಾಡಳಿತದ ಕಣ್ಣಗಾವಲಿನಲ್ಲಿರಿಸಬೇಕು ಎಂದರು.

ನಗರದಲ್ಲಿ ಸಂಚರಿಸುವ ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸುವುದು ಹಾಗೂ ಚಾಲಕನ ಸೀಟಿನ ಹಿಂಭಾಗದಲ್ಲಿ ಚಾಲಕ/ಮಾಲೀಕರ ಸಂಪೂರ್ಣ ವಿವರ ಹೊಂದಿರುವ ಮಾಹಿತಿ ಫಲಕ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ತಿಳಿಸಿದರು.

ನಗರದ ವಾಣಿಜ್ಯ ಸಂಕೀರ್ಣಗಳ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಸ್ಥಳಗಳಲ್ಲಿ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಜಂಟಿ ಕಾರ್ಯಾಚರಣೆ ಮೂಲಕ ಒತ್ತುವರಿ ತೆರವುಗೊಳಿಸಬೇಕು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದರು.

ರಸ್ತೆ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ‘ಗೋಲ್ಡನ್ ಅವರ್’ (ಮೊದಲ ಗಂಟೆ) ಅವಧಿಯಲ್ಲಿ ತಕ್ಷಣದ ಉಚಿತ ತುರ್ತು ಚಿಕಿತ್ಸೆ ನೀಡುವುದು ಕಡ್ಡಾಯವಾಗಿದೆ. ‘ಪಿಎಂ ರಹಾತ್’ ಯೋಜನೆಯಡಿ ನಿಗದಿತ ಆಸ್ಪತ್ರೆಗಳಲ್ಲಿ ಗರಿಷ್ಠ ರೂ. 1.50 ಲಕ್ಷದವರೆಗೆ ಉಚಿತ ಚಿಕಿತ್ಸೆಗೆ ಅವಕಾಶವಿದ್ದು, ಆಸ್ಪತ್ರೆಗಳು ವಿಳಂಬವಿಲ್ಲದೆ ಅರ್ಜಿ ಅನುಮೋದಿಸಬೇಕು. ಈ ಕುರಿತು ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆಯಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶೇಖರ್‌ ಹೆಚ್.ಟಿ ಅವರು ಮಾತನಾಡಿ, ಜಿಲ್ಲೆಯಲ್ಲಿದ್ದ 32 ಬ್ಲಾಕ್‌ ಸ್ಪಾಟ್‌ಗಳಲ್ಲಿ ಸಮರ್ಪಕ ಸೂಚನಾ ಫಲಕ ಹಾಗೂ ರಸ್ತೆ ದುರಸ್ತಿ ಮಾಡಿಸಿ ಈಗ ಬಾಕಿ ಸಂಖ್ಯೆಯನ್ನು 17ಕ್ಕೆ ಇಳಿಸಲಾಗಿದೆ, ಹೆದ್ದಾರಿ ಕಾಮಗಾರಿ ನಡೆಯುವ ಭಾಗಗಳಲ್ಲಿ ಕಡ್ಡಾಯವಾಗಿ ಸ್ಪಷ್ಟವಾಗಿ ಕಾಣಿಸುವ ಸೂಚನಾ ಫಲಕಗಳು, ಸುರಕ್ಷಿತ ಬ್ಯಾರಿಕೇಡ್‌ಗಳು, ರಾತ್ರಿ ವೇಳೆಯಲ್ಲಿ ಚಾಲಕರಿಗೆ ಗೋಚರಿಸುವ ರಿಫ್ಲೆಕ್ಟರ್‌ಗಳು ಹಾಗೂ ಬ್ಲಿಂಕರ್ ಲೈಟ್‌ಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.

ನಗರದ ಪ್ರಮುಖ ಸ್ಥಳಗಳು ಹಾಗೂ ಹೆದ್ದಾರಿಗಳ ಸಿಸಿಟಿವಿ ಕ್ಯಾಮೆರಾಗಳನ್ನು ಐಟಿ ಇಲಾಖೆ ಹಾಗೂ ಎಪಿಕೆ (APK) ಫೈಲ್ ಮೂಲಕ ತಕ್ಷಣವೇ ಕಮಾಂಡ್ ಸೆಂಟರ್‌ಗೆ ಲಿಂಕ್ ಮಾಡಬೇಕು. ಅರನಹಳ್ಳಿ ಸೇತುವೆ (ದೇವರಬೆಳಕೆರೆ ನಾಲೆ ಸಮೀಪ) ಹಾಗೂ ಜಗಳೂರು-ಹರಿಹರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 369 ರ ಅಪಾಯಕಾರಿ ತಿರುವುಗಳಲ್ಲಿ ತಕ್ಷಣವೇ ತಾತ್ಕಾಲಿಕ ತಡೆಗೋಡೆ (ಬ್ಯಾರಿಕೇಡ್), ಸೂಚನಾ ಫಲಕ ಹಾಗೂ ಅಗತ್ಯ ರಸ್ತೆ ಸುರಕ್ಷತಾ ಮಾರ್ಪಾಡುಗಳನ್ನು ಮಾಡಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್‌, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮುರಳಿಧರ್‌ , ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಇತರರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now