ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 19 : ತಾಲೂಕಿನಲ್ಲಿ ಶೇಂಗಾ, ಈರುಳ್ಳಿ ಹಾಗೂ ಟೊಮೋಟೊ ಸೇರಿದಂತೆ ಇತರೆ ಬೆಳೆಗಳು ವಾಡಿಕೆಯ ಮಳೆ ಬಾರದೆ ಬೆಳೆಗಳು ನಶಿಸಿರುವುದರಿಂದ ಅಧಿಕಾರಿಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ರೈತ ಪರವಾಗಿ ವರದಿಯನ್ನು ನೀಡಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಶಾಸಕ ಟಿ ರಘುಮೂರ್ತಿ ತಾಕೀತು ಮಾಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳ ನಷ್ಟ ಪರಿಹಾರದ ಬಗ್ಗೆ ಸರಿಯಾದ ವರದಿ ಸಲ್ಲಿಸಿದಾಗ ಮಾತ್ರ ಸರ್ಕಾರದಿಂದ ರೈತರಿಗೆ ಪರಿಹಾರ ದೊರೆಯಲು ಸಾಧ್ಯ ರೈತ ಪರವಾದ ವರದಿಯನ್ನು ತಯಾರಿಸಿ ನೀಡಬೇಕು ರೈತರು ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮಳೆ ಬಾರದೆ ಇರುವುದರಿಂದ ಸಾಧ್ಯವಾಗಿಲ್ಲ ಆದ್ದರಿಂದ ಸೂಕ್ತ ನ್ಯಾಯ ದೊರಕಿಸಿಕೊಟ್ಟು ರೈತರು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಿ ಎಂದರು.
ಕೃಷಿ ಅಧಿಕಾರಿ ಅಶೋಕ್ ಮಾತನಾಡಿ ತಾಲೂಕಿನಲ್ಲಿ ಈವರೆಗೆ 484 ಮಿಲಿ ಮೀಟರ್ ಮಳೆ ಆಗಬೇಕಿತ್ತು, ಆದರೆ 370.5 ರಷ್ಟು ಮಳೆಯಾಗಿದ್ದು ಇದರಿಂದ ರೈತರ ಬೆಳೆಗಳು ಹೂ ಬಿಡುವ ಒಣಗುತ್ತಿವೆ ರೈತರಿಂದ ಈಗಾಗಲೇ ಮಾಹಿತಿ ತರಿಸಿಕೊಂಡಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
2022-23ನೇ ಸಾಲಿನ ಬೆಳೆ ಪರಿಹಾರದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಈಗಾಗಲೇ ತನಿಖೆ ಕೈಗೊಂಡಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ತಿಳಿಸಲಾಗಿದ್ದು ಆ ವೇಳೆಯಲ್ಲಿ ಯಾವ ರೈತರಿಗೆ ಅನ್ಯಾಯವಾಗಿದೆ ಅಂತಹ ಅವರ ಖಾತೆಗೆ ಆ ಅವ್ಯವಹಾರದ ಹಣವನ್ನು ದೋಷ ಎಸಗಿದ ಅಧಿಕಾರಿಗಳಿಂದ ವಸೂಲಿ ಮಾಡಿ ಹಿಂದಿರುಗಿಸಲಾಗುವುದು ಎಂದು ಭರವಸೆ ನೀಡಿದರು.
ರೇಷ್ಮೆ ಬೆಳೆಗೆ ಉತ್ತೇಜಿಸಿ: ತಾಲೂಕಿನಲ್ಲಿ ರೇಷ್ಮೆ ಬೆಳೆಗಾರರು ರೇಷ್ಮೆ ಬೆಳೆಯಲು ಹಿಂದೇಟು ಹಾಕುತ್ತಿದ್ದು ಅಂತಹ ರೈತರನ್ನು ಗುರುತಿಸಿ ರೇಷ್ಮೆ ಇಲಾಖೆ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ರೇಷ್ಮೆ ಬೆಳೆಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.
ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಮಾತನಾಡಿ ತಾಲೂಕಿನಲ್ಲಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪುಸ್ತಕ ಶೂ ಸಾಕ್ಸ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಈಗಾಗಲೇ ಸರ್ವರಾಜು ಮಾಡಲಾಗಿದ್ದು ಮಕ್ಕಳಿಗೆ ತಲುಪಿಸಲಾಗಿದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಹೆಚ್ಚಿಸಲು ಈಗಾಗಲೇ ಇಲಾಖೆ ಸೂಚಿಸಿರುವ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದು ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ರಘುಮೂರ್ತಿ ಮಾತನಾಡಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಅತ್ಯಂತ ಕಳಪೆ ಸಾಧನೆ ತೋರಿದ್ದು ಆದ್ದರಿಂದ ಈ ಸಾಲಿನಲ್ಲಿ ಉತ್ತಮ ಫಲಿತಾಂಶ ಬರಲು ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಸೇರಿದಂತೆ ಅಧಿಕಾರಿಗಳು ಶ್ರಮವಹಿಸಬೇಕು ಅತ್ಯಂತ ಹಿಂದುಳಿದ ಹಾಗೂ ವಿಷಯಗಳಲ್ಲಿ ಫೇಲಾಗುವ ವಿದ್ಯಾರ್ಥಿಗಳನ್ನು ಗುರುತಿಸಿ ಕನಿಷ್ಠಪಕ್ಷ 35 ಅಂಕ ಪಡೆದು ಪಾಸಾಗಲು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಇಲಾಖೆಗಳಲ್ಲಿನ ಪ್ರಗತಿಗಳ ಬಗ್ಗೆ ಹಾಗೂ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಹಾನ್ ಪಾಷಾ ತಾಲೂಕು ಪಂಚಾಯಿತಿ ಇಓ ಶಶಿಧರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಚಿತ್ರದುರ್ಗ ತಹಸೀಲ್ದಾರ್ ಗೋವಿಂದ್ ರಾಜ್ ಈಗ ರವಿಕುಮಾರ್ ನಗರಸಭೆ ಅಧ್ಯಕ್ಷೆ ಶಿಲ್ಪಾ ಪೌರಾಯುಕ್ತ ಜಗರೆಡ್ಡಿ ತಾಲೂಕು ಪಂಚಾಯತಿ ಕೆಡಿಪಿ ಸದಸ್ಯರಾದ ನೇತ್ರಾವತಿ ಟಿ ಬಸವರಾಜ್ ರಮೇಶ್ ಸುರೇಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.













