ಬೆಂಗಳೂರು: ನಿರ್ದೇಶಕ ಎಸ್ ನಾರಾಯಣ್ ಅವರ ಮಗ – ಸೊಸೆಯ ಸಂಸಾರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸೊಸೆ ಪವಿತ್ರಾ ಅವರು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ತಮ್ಮ ಮಾವನ ವಿರುದ್ಧವೇ ದೂರು ನೀಡಿದ್ದಾರೆ. 2021ರಲ್ಲಿ ಎಸ್ ನಾರಾಯಣ್ ಪುತ್ರ ಪವನ್ ಹಾಗೂ ಪವಿತ್ರಾ ಮದುವೆಯಾಗಿತ್ತು. ಅದ್ದೂರಿಯಾಗಿಯೇ ನಡೆದಿದ್ದ ಈ ಮದುವೆ ಇದೀಗ ಮುರಿದು ಬೀಳುವ ಸ್ಥಿತಿ ತಲುಪಿದೆ.
ಮದುವೆಯಾಗಿ ನಾಲ್ಕು ವರ್ಷ ಕಳೆಯುವುದರೊಳಗೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವರದಕ್ಷಿಣೆ ಕಿರುಕುಳದಡಿಯಲ್ಲಿ ಸೊಸೆ ಪವಿತ್ರಾ ದೂರು ನೀಡಿದ್ದು, ಎಸ್ ನಾರಾಯಣ್, ಅವರ ಪತ್ನಿ ಭಾಗ್ಯವತಿ ಹಾಗೂ ಗಂಡ ಪವನ್ ವಿರುದ್ಧ ದೂರು ನೀಡಿದ್ದಾರೆ. ಮದುವೆಯಲ್ಲಿ ಈಗಾಗಲೇ ವರದಕ್ಷಿಣೆಯನ್ನು ನೀಡಲಾಗಿದೆ. ಆದರೂ ಹೆಚ್ಚಿನ ವರದಕ್ಷಿಣೆ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದಿದ್ದಾರೆ.
ಇದೇ ವೇಳೆ ಮನೆಯನ್ನು ತಾನೇ ನಡೆಸುತ್ತಿದ್ದರ ಬಗ್ಗೆಯೂ ಹೇಳಿದ್ದಾರೆ. ಪವನ್ ಗೆ ಕೆಲಸ ಇಲ್ಲ. ಹೀಗಾಗಿ ನಾನೇ ಕೆಲಸ ಮಾಡಿ ಮನೆ ನಡೆಸುತ್ತಿದ್ದೆ. ಆದರೆ ಕಲಾ ಸಾಮ್ರಾಟ್ ಅಕಾಡೆಮಿ ಆರಂಭಿಸಲು ಹಣಕ್ಕೆ ಬೇಡಿಕೆ ಇಡಲಾಯ್ತು. ಆಗ ನಾನು ನಮ್ಮ ತಾಯಿಯ ಒಡವೆಯನ್ನು ಅಡವಿಟ್ಟು ಹಣ ಕೊಟ್ಟಿದ್ದೆ. ಆದರೆ ಕಲಾಸಾಮ್ರಾಟ್ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಯ್ತು ಎಂದು ಪವಿತ್ರಾ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಪವಿತ್ರಾ ಅವರು ತಮ್ಮ ಹೆಸರಲ್ಲಿ 10 ಲಕ್ಷ ಸಾಲ ಮಾಡಿ ಕೂಡ ಕೊಟ್ಟಿದ್ದರಂತೆ.
ಈ ಸಂಬಂಧ ಮಾತನಾಡಿರುವ ಎಸ್.ನಾರಾಯಣ್, ಪವಿತ್ರಾ ಮನೆ ಬಿಟ್ಟು ಹೋಗಿ 10 ತಿಂಗಳಾಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಅಂತ ಕೇಳಿದರೆ ನಾನು ಅವರಹೆಸರಿಗೆಮಸಿ ಬಳಿದಂತೆ ಆಗುತ್ತದೆ. ವಯಸ್ಸು, ವ್ಯಕ್ತಿತ್ವ ಎರಡಕ್ಕೂ ಪವಿತ್ರಾ ಬೆಲೆ ಕೊಡ್ತಾ ಇರಲಿಲ್ಲ. ಮದುವೆ ಆಗಿ ಒಂದು ತಿಂಗಳಿಗೇನೆ ಮಾತುಕತೆ ನಿಂತು ಹೋಯ್ತು ಎಂದಿದ್ದಾರೆ.

