ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 17 : ಅತ್ಯಂತ ನೋವುಂಡ ಜನರನ್ನು ಮುಖ್ಯವಾಹಿನಿಗೆ ತರಲು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗಾಗಿ ಸರ್ಕಾರ ಕ್ರಮಕೈಗೊಂಡಿರುವುದು ಸ್ವಾಗತಾರ್ಹ. ಒಳಮೀಸಲಾತಿ ಜಾರಿಗಾಗಿ ಉದ್ಯೋಗ ನೇಮಕಾತಿಗೆ ತಡೆ ನೀಡಿದ್ದು ಸರಿಯಿದ್ದರೂ, ಅದರ ತಡೆ ತೆರವನ್ನು ಶೀಘ್ರ ಕ್ರಮಕೈಗೊಳ್ಳಬೇಕೆಂದು ಕನಕ ನಿವೃತ್ತ ನೌಕರ ಸಂಘದ ತಾಲ್ಲೂಕು ಉಪಾಧ್ಯಕ್ಷ ಡಿ.ಆರ್.ಲೋಕೇಶ್ವರಪ್ಪ ಆಗ್ರಹಿಸಿದ್ದಾರೆ.
ಈಗಾಗಲೇ 9 ತಿಂಗಳ ಕಾಲ ಉದ್ಯೋಗ ನೇಮಕಾತಿ ಇಲ್ಲದೆ ವಿದ್ಯಾವಂತರು, ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪರಿಶಿಷ್ಟ ಜಾತಿಯಲ್ಲಿನ ಮೀಸಲಾತಿ ವರ್ಗೀಕರಣ ನ್ಯಾಯಸಮ್ಮತವಾದದ್ದು ಎಂಬ ಕಾರಣಕ್ಕೆ ಉದ್ಯೋಗ ನೇಮಕಾತಿಗೆ ತಡೆ ಹಾಕಿದ್ದನ್ನು ಹಿಂದುಳಿದ, ಪರಿಶಿಷ್ಟ ಪಂಗಡ ಸೇರಿ ಯಾವುದೇ ಸಮುದಾಯಗಳು ಆಕ್ಷೇಪ ವ್ಯಕ್ತಪಡಿಸಲಿಲ್ಲ.

ಆರೇಳು ತಿಂಗಳಲ್ಲಿಯೇ ಒಳಮೀಸಲಾತಿ ಜಾರಿಗೊಳ್ಳುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ರಾಜ್ಯದಲ್ಲಿ ಎಸ್ಸಿಯಲ್ಲಿನ ಜಾತಿಗಳನ್ನು, ಅವರ ಹಿಂದುಳಿಯುವಿಕೆ ಗುರುತಿಸುವಲ್ಲಿ ಸಮಯ ಆಗಿದೆ. ಈಗ ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿಯನ್ನು ಆಗಸ್ಟ್ 4ರಂದು ಸರ್ಕಾರಕ್ಕೆ ಸಲ್ಲಿಸಿದೆ. ಇದೇ ಆಗಸ್ಟ್ 07ರಂದು ಸಚಿವ ಸಂಪುಟದಲ್ಲಿ ಮಂಡಿಸಲಾಗಿದೆ. ಇದೇ ವಿಷಯದ ಹಿನ್ನೆಲೆಯಲ್ಲಿ ಆಗಸ್ಟ್ 16ರಂದು ಸಭೆ ಕರೆಯಲಾಗಿತ್ತು. ಈಗ ಆ ಸಭೆಯನ್ನೂ ಮುಂದೂಡಿರುವುದು ತೀವ್ರ ಆತಂಕಕ್ಕೆ ಸಿಲುಕಿದೆ. ಆಗಸ್ಟ್ 19ರ ವಿಶೇಷ ಸಂಪುಟದಲ್ಲಿ ಒಳಮೀಸಲಾತಿ ಜಾರಿ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೇ ಉದ್ಯೋಗ ನೇಮಕಾತಿಗಿರುವ ತಡೆ ತೆರವುಗೊಳಿಸಲೇಬೇಕೆಂದು ಆಗ್ರಹಿಸಿದ್ದಾರೆ.
ಹಿಂದುಳಿದ, ಅಲ್ಪಸಂಖ್ಯಾತರು, ಪರಿಶಿಷ್ಟ ಪಂಗಡದ ವಿದ್ಯಾವಂತರೆಲ್ಲರ ಕಣ್ಣು ಆಗಸ್ಟ್ 19ರ ವಿಶೇಷ ಸಚಿವ ಸಂಪುಟದತ್ತ ಇದೆ. ಒಳಮೀಸಲಾತಿ ಜಾರಿಗೊಳಿಸಿದರೆ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಲಿದೆ. ಜೊತೆಗೆ ಉದ್ಯೋಗ ನೇಮಕಾತಿಗೆ ಅರ್ಜಿ ಸಲ್ಲಿಕೆಯ ವಯೋಮಿತಿಯನ್ನು ಒಂದು ವರ್ಷ ಸಡಿಲಗೊಳಿಸುವ ಜೊತೆಗೆ ಎಲ್ಲ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ತಕ್ಷಣ ನೇಮಕಾತಿ ಪ್ರಕ್ರಿಯೆಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.















