ಧರ್ಮಸ್ಥಳ ಆಡಳಿತ ಮಂಡಳಿ ಮೇಲೆ ಕಪ್ಪು ಚುಕ್ಕೆ ತರಲು ಷಡ್ಯಂತ್ರ : ಡಿಕೆ ಶಿವಕುಮಾರ್ ಹೇಳಿದ್ದೇನು..?

1 Min Read

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದಲ್ಲಿ ಶವಗಳ ಹೂತು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ ಮಾತು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರವೇ ನಡೆದಿದೆ. ಧರ್ಮಸ್ಥಳ ಆಡಳಿತ ಮಂಡಳಿಗೆ ಕಪ್ಪು ಚುಕ್ಕೆ ತರಲು ಈ ಷಡ್ಯಂತ್ರ ರೂಪಿಸಿದ್ದಾರೆ ಎಂದಿದ್ದಾರೆ.

ನಾನು ಧರ್ಮಸ್ಥಳ ಕ್ಷೇತ್ರ ಹಾಗೂ ಆ ದೇವಸ್ಥಾನದ ಮೇಲೆ ನಂಬಿಕೆ ಇರುವವನು. ನನಗೆ ಧರ್ಮಾಧಿಕಾರಿಗಳ ಮೇಲೂ ನಂಬಿಕೆ ಇದೆ. ಅವರ ಆಚಾರ ವಿಚಾರಗಳ ಬಗ್ಗೆ ಅರಿವಿದೆ. ಈ ಪ್ರಕರಣದಲ್ಲಿ ಪರಿಸ್ಥಿತಿ ಏನಿದೆ ಎಂದು ಗೃಹ ಸಚಿವರು ವಿವರಣೆಯನ್ನು ನೀಡುತ್ತಾರೆ. ನಮಗೆ ಈ ಪ್ರಕರಣದ ವಿಚಾರ ಗೊತ್ತಿದೆ. ಆದರೆ ಸರ್ಕಾರ ಎಸ್ಐಟಿ ರಚಿಸಲು ಕಾರಣವೇನು ಎಂಬುದನ್ನು ವಿವರಿಸುತ್ತಾರೆ. ಈ ವಿಚಾರವಾಗಿ ಇಲ್ಲಿ ನಾವು ‌ನಾಲ್ಕು ಜನ ಮಾತನಾಡುವುದಷ್ಟೇ ಅಲ್ಲ. ಲಕ್ಷಾಂತರ ಭಕ್ತಾಧಿಗಳು ಈ ಕಗಷೇತ್ರ ನಂಬಿದ್ದಾರೆ. ದೇಶದಲ್ಲಿ ಅನ್ನ ದಾಸೋಹ ಆರಂಭವಾಗದೆ ಇದ್ದ ಕಾಲದಲ್ಲಿಯೇ ಈ ಕ್ಷೇತ್ರದಲ್ಲಿ ಇದನ್ನ ಆರಂಭಿಸಲಾಗಿತ್ತು.

ಈ ವಿಚಾರವನ್ನು ನೀವೂ ರಾಜಕೀಯವಾಗಿ ತಿರುಗಿಸಬೇಡಿ. ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಹೈಕಮಾಂಡ್ ಎಂದು ಎಳೆದು ತರಬೇಡಿ. ಈ ಪ್ರಕರಣದಲ್ಲಿ ಕಾಂಗ್ರೆಸ್ ಯಾಕೆ ಹಸ್ತಕ್ಷೇಪ ಮಾಡುತ್ತದೆ. ಅಲ್ಲಿನ ಆಂತರಿಕ ಸಮಸ್ಯೆಯಿಂದ ಯಾವನೋ ಒಬ್ಬ ಬಂದು ಆರೋಪ ಮಾಡಿದ್ದಾನೆ. ನಿಮಗಿಂತ ಹೆಚ್ಚಾಗಿ ನಮ್ಮ ಪಕ್ಷದಲ್ಲಿಯೇ ಶಿವಲಿಂಗೇಗೌಡರು, ಅಶೋಕ್ ರೈ ಸೇರಿದಂತೆ ಅನೇಕ ಶಾಸಕರು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಧ್ವನಿ ಎತ್ತಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ನಂಬಿಕೆ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ ನಾಶವಾಗಬಾರದು. ಧರ್ಮಾಧಿಕಾರಿಗಳು ಮೊದಲಿನಿಂದಲೂ ಸಾಮಾಜಿಕ ಸೇವೆ, ಧಾರ್ಮಿಕ ಸೇವೆ ಮಾಡಿಕೊಂಡು ಬರುತ್ತಿದ್ದು, ಅವರ ಮೇಲೆ ನಮಗೆ ಯಾವುದೇ ಅನುಮಾನವಿಲ್ಲ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಅವರ ಧಾರ್ಮಿಕ ಕೆಲಸಗಳ ಬೆನ್ನಿಗೆ ನಿಲ್ಲಲು ಬದ್ಧವಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks