ಬೆಂಗಳೂರು: ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಇಂದಿನಿಂದ ಶುರುವಾದ ಅಧಿವೇಶನ ಆಗಸ್ಟ್ 22ರವರೆಗೂ ನಡೆಯಲಿದೆ. ಮಧ್ಯೆ ಎರಡು ದಿನ ರಜೆ ಬಿಟ್ಟರೆ ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಈ ವೇಳೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಆರಂಭದ ಕಲಾಪದಲ್ಲಿಯೇ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಮಾತಿನ ಸಮರ ಜೋರಾಗಿಯೇ ನಡೆಯಲಿದೆ ಎಂದೇ ಹೇಳಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಹೀಗಾಗಿ ಸರ್ಕಾರದ ವಿಫಲತೆಗಳನ್ನೇ ಮಾನದಂಡ ಮಾಡಿಕೊಂಡು, ವಾಕ್ಸಮರ ಮಾಡುವುದಕ್ಕೆ ಬಿಜೆಪಿ ರೆಡಿಯಾಗಿದೆ. ಹಾಗೇ ಆಡಳಿತ ಪಕ್ಷ ಕಾಂಗ್ರೆಸ್ ಕೂಎ ಅದಕ್ಕೆ ತಕ್ಕ ಉತ್ತರ ನೀಡುವುದಕ್ಕೂ ಸಿದ್ಧತೆ ನಡೆಸಿದೆ.
ಆಡಳಿತ ಪಕ್ಷ ಕಾಂಗ್ರೆಸ್ ಕೂಡ ಒಂದಷ್ಟು ಚರ್ಚಾ ವಿಷಯಗಳಿಗೆ ಸಿದ್ಧತೆ ನಡೆಸಿದೆ. ಅದರಲ್ಲಿ ಮಹದಾಯಿ ವಿಚಾರ ಬಹಳ ಮುಖ್ಯವಾದದ್ದಾಗಿದೆ. ಗೋವಾ ಸಿಎಂ ಹೇಳಿದ ಹೇಳಿಕೆ ಸಂಬಂಧ ಚರ್ಚೆ ನಡೆಯಲಿದೆ. ತೆರಿಗೆ ಹಂಚಿಕೆ ಅನ್ಯಾಯ, ಕೇಂದ್ರದ ಅನುದಾನ ತಾರತಮ್ಯದ ಬಗ್ಗೆಯೂ ಆಡಳಿತ ಪಕ್ಷ ಬಾಣ ಬಿಡಲಿದೆ.
ಹಾಗೇ ವಿಪಕ್ಷ ನಾಯಕರು, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆ ಬಗ್ಗೆ ಚರ್ಚೆ, ಹಳೇ ವರದಿ ಅಂಗೀಕರಿಸದೆ ಹೊಸ ಜಾತಿ ಗಣತಿಗೆ ನಿರ್ಧಾರ, ಎಸ್ಎಸ್ಟಿಗೆ ಮೀಸಲಾದ ಅನುದಾನ ಬೇರೆಡೆಗೆ ವರ್ಗಾವಣೆ, ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ, ಶಾಸಕರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ, ರಾಜ್ಯದಲ್ಲಿ ಯೂರಿಯಾ ಗೊಬ್ಬರ ವಿತರಣೆಯಲ್ಲಿ ತಾರತಮ್ಯ, ಧರ್ಮಸ್ಥಳದ ಅಪಪ್ರಚಾರಕ್ಕೆ ಸರ್ಕಾರ ಕುಮ್ಮಕ್ಕು ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದೆ.
















