ನಮ್ಮೂರ ದೇಗುಲ : ಹೊಳಲ್ಕೆರೆ : ಹೊರಕೆರೆದೇವರಪುರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮಂದಿರದ ಪರಿಚಯ

3 Min Read

ವಿಶೇಷ ಲೇಖನ
ಡಾ. ಕೆ ವಿ ಸಂತೋಷ್.
ದಂತ  ವೈದ್ಯರು
ಹೊಳಲ್ಕೆರೆ 577526.
ಚಿತ್ರದುರ್ಗ ಜಿಲ್ಲೆ, ಮೊ : 9342466936

 

ಹೊರಕೆರೆದೇವರಪುರ ಗ್ರಾಮವು ಹೊಳಲ್ಕೆರೆಯಿಂದ ಈಶಾನ್ಯಕ್ಕೆ 23 ಕಿಲೋಮೀಟರ್ ದೂರವಿದ್ದು,ಹೊಳಲ್ಕೆರೆ-ಚಿತ್ರಹಳ್ಳಿ-ಹೊರಕೆರೆದೇವರಪುರ-ಮಾಡದಕೆರೆ ಮಾರ್ಗದಲ್ಲಿದೆ. ಗ್ರಾಮದ ಹಿಂದಿನ ಮೂಲ ಹೆಸರು ಹೊರಕೇರಿದೇವರಪುರ.ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರವಾದ ಹೊರಕೆರೆದೇವರಪುರ ಗ್ರಾಮವು ಐತಿಹಾಸಿಕ,ಶಾಸನಸ್ಥ,ಧಾರ್ಮಿಕ ಹಾಗೂ ವಾಣಿಜ್ಯ ಕೇಂದ್ರವಾಗಿದೆ.30 ಕ್ಕೂ ಅಧಿಕ ಗ್ರಾಮಗಳಿಗೆ ಕೇಂದ್ರ ಸ್ಥಳವಾಗಿದೆ.

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮಂದಿರವು ಹೊಳಲ್ಕೆರೆ ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ದೇವಾಲಯವಾಗಿದೆ. ದೊಡ್ಡ ಹಾಗೂ ವಿಶಾಲ ಅಂಕಣದ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಸುಂದರ ವಾಸ್ತುವಿನ ರಾಜಗೋಪುರ ಇಡೀ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಹೊರಕೆರೆದೇವರಪುರ ಗ್ರಾಮದ ಮಧ್ಯದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಪೂರ್ವಾಭಿಮುಖವಾಗಿದ್ದು, ಕ್ರಿಸ್ತಶಕ 17- 18 ನೇ ಶತಮಾನದಲ್ಲಿ ಪಾಳೆಯಗಾರರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು ಹೊರಕೆರೆ ರಂಗನಾಥಸ್ವಾಮಿ ಎಂದು ಕರೆಯಲಾಗುತ್ತದೆ. ಶಾಸನಗಳಲ್ಲಿ ಇದನ್ನು ಹೊರಕೆರೆ ರಂಗಧಾಮ ಎಂದು ಕರೆದಿದೆ. ವಿಶಾಲವಾದ ಪ್ರಾಂಗಣದಲ್ಲಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ ,ನವರಂಗ, ಸಭಾಮಂಟಪ, ಮಹಾಮಂಟಪ, ಗಾಳಿ ಗೋಪುರ ,ಧ್ವಜಸ್ಥಂಭ,ಪ್ರಾಂಗಣ ಗೋಡೆ, ಬಲಿಪೀಠ, ಮಹಾದ್ವಾರಗಳನ್ನು ಹೊಂದಿದೆ.ದೇವಾಲಯದ ಮುಂಭಾಗದಲ್ಲಿ ಉಯ್ಯಾಲೆ ಕಂಬ, ರಥ ಮಂಟಪಗಳಿವೆ. ದೇವಾಲಯದ ಪ್ರಾಂಗಣದಲ್ಲಿ ಬಲಭಾಗಕ್ಕೆ ಲಕ್ಷ್ಮಿ ,ನಂದಿ, ಪಾದ ದೇವರ ಗುಡಿಗಳು ಎಡಭಾಗಕ್ಕೆ ಭೈರವ,ಆಂಜನೇಯನ ಚಿಕ್ಕದಾದ ಗುಡಿಗಳಿವೆ.

ರಥಬೀದಿಯ ಬಲಭಾಗದಲ್ಲಿ ತೆಪ್ಪೋತ್ಸವಕ್ಕೆಂದು ನಿರ್ಮಾಣ ಮಾಡಲಾದ ವಿಶಾಲವಾದ ಕೊಳವಿದೆ.
ಗರ್ಭಗೃಹದಲ್ಲಿ ಉದ್ಭವ ಮೂರ್ತಿಯೆಂದು ಹೇಳುವ ಸ್ಥಳದಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಎಂದು ಹೇಳಲಾಗುವ ಕಲ್ಲು ಗುಂಡನ್ನು ಇಟ್ಟು ಪೂಜಿಸಲಾಗುತ್ತದೆ.ಒಡಮೂಡಿರುವ ಹುತ್ತವಿದೆ. ಗರ್ಭಗೃಹದ ಬಾಗಿಲುವಾಡದಲ್ಲಿ ಪೂರ್ಣಕುಂಭಗಳಿವೆ. ಅಂತರಾಳದಲ್ಲಿ ಉತ್ಸವ ಮೂರ್ತಿಗಳನ್ನು ಇಡಲಾಗಿದೆ.ನವರಂಗದಲ್ಲಿ ನಾಲ್ಕು ಕಂಬಗಳಿವೆ .ಇವು ಚಿತ್ರ ಕಾಂಡ ಕಂಬಗಳಾಗಿವೆ. ನವರಂಗದ ಮುಂಭಾಗದಲ್ಲಿ 24 ಕಂಬಗಳ ವಿಶಾಲವಾದ ಸಭಾಮಂಟಪವಿದೆ. ಮಹಾಮಂಟಪದ ಎಡಭಾಗದಲ್ಲಿ ಆಂಜನೇಯನ ಶಿಲ್ಪವಿದೆ.

ದೀಪಸ್ತಂಭವು ಸುಮಾರು 30 ಅಡಿ ಎತ್ತರವಾಗಿದೆ. ಮಹಾದ್ವಾರಗಳನ್ನು ನಾಲ್ಕು ಹಂತಗಳಲ್ಲಿ ಕಟ್ಟಲಾಗಿದೆ. ಇದನ್ನು ಸಂಪೂರ್ಣ ಕಣಶಿಲೆಯನ್ನು ಬಳಸಿ ನಿರ್ಮಿಸಿರುವರು.ಇದು ಚಿತ್ರದುರ್ಗದ ಗಾಳಿಗೋಪುರಗಳ ಮಾದರಿಯಲ್ಲಿದೆ. ತಾಳ್ಯದ ಶಾಸನದಲ್ಲಿ ಹೊರಕೆರೆರಂಗನಾಥನ ನೈವೇದ್ಯಕ್ಕೆ ಕೋಡಿಹಳ್ಳಿ ಗ್ರಾಮವನ್ನು ಸಂತೆಬೆನ್ನೂರು ಹನುಮಪ್ಪ ನಾಯಕರಿಗೆ ಧರ್ಮವಾಗಲೆಂದು ಬಾಲೆಯ ನಾಯಕನು ಬಿಟ್ಟುಕೊಟ್ಟುದಾಗಿ ಹೇಳಿದೆ. ಈ ದೇವಾಲಯದ ಪ್ರಮುಖ ಉತ್ಸವ ಫಾಲ್ಗುಣ ಮಾಸದಲ್ಲಿ ಜರುಗುತ್ತದೆ. ಪುಬ್ಬಾ ನಕ್ಷತ್ರದಲ್ಲಿ ಕಲ್ಯಾಣೋತ್ಸವ, ಹೋಳಿ ಹುಣ್ಣಿಮೆಯಂದು ಬೆಳಿಗ್ಗೆ ತೇರು ಹಾಗೂ ಮಧ್ಯಾಹ್ನ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗುತ್ತವೆ.
ವೈಷ್ಣವ ಕ್ಷೇತ್ರವಾದ ಈ ಮಂದಿರದ ಗರ್ಭಗುಡಿಯನ್ನು 1348 ರಲ್ಲಿ ದುಮ್ಮಿಯ ವೀರಪ್ಪ ನಾಯಕ ನಿರ್ಮಿಸಿದ ಬಗ್ಗೆ ಶಾಸನವಿದೆ.

ಐತಿಹ್ಯದಂತೆ ಹಿಂದೆ ಇಲ್ಲಿ ನಂದರಾಜ ನೆಂಬುವನು ಆಳ್ವಿಕೆ ಮಾಡುತ್ತಿದ್ದನು. ತಿರುಪತಿಗೆ ಭಕ್ತರು ನಡೆದುಕೊಂಡು ಹೋಗುತ್ತಿದ್ದಾಗ ಅವರ ಬಳಿ ಇದ್ದ ಹಣ ಕಸಿದುಕೊಂಡು ಚರ್ಮದ ನಾಣ್ಯ ನೀಡಿ ಹಿಂಸಿಸುತ್ತಿದ್ದನಂತೆ. ನೊಂದ ಭಕ್ತರು ತಿಮ್ಮಪ್ಪನನ್ನು ಬೇಡಿಕೊಂಡಾಗ ಇಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಕರೇಕಲ್ಲು ಬೆಟ್ಟದ ಮೇಲೆ ಪಾದ ಊರಿ ಭಸ್ಮ ಮಾಡಿದನಂತೆ. ಊರು ದಹಿಸಲು ಮುಂದಾದಾಗ ತಾಯಿಯೊಬ್ಬಳು ನಂದನನ್ನು ಕೊಂದೆ ನನ್ನ ಮಗುವನ್ನು ಕಾಪಾಡು ಎಂದು ಬೇಡಿದಾಗ ಸ್ವಾಮಿಯು ಶಾಂತನಾಗಿ ಹುತ್ತದಲ್ಲಿ ನೆಲೆಸಿದನಂತೆ.

ಮತಿಘಟ್ಟದ ಹಸು ಇಲ್ಲಿಗೆ ಬಂದು ಪ್ರತಿನಿತ್ಯ ಕ್ಷೀರಾಭಿಷೇಕ ಮಾಡುವುದನ್ನು ಕಂಡ ಭಕ್ತರು ಸ್ವಾಮಿಯ ಆದೇಶದಂತೆ ಇಲ್ಲಿ ಒಂದು ಗುಡಿ ಕಟ್ಟಿಸಿದರಂತೆ.ಕೇರಿಯ ಹೊರಭಾಗದಲ್ಲಿ ದೇವರು ನೆಲೆನಿಂತದ್ದರಿಂದ ಇದು ಹೊರ-ಕೇರಿ-ದೇವರ-ಪುರ ವಾಯಿತು .ಕಾಲಾನಂತರ ಜನರ ಬಾಯಲ್ಲಿ ಹೊರಕೆರೆದೇವರಪುರ ವಾಯಿತು. ಪ್ರತಿ 12 ವರ್ಷಕ್ಕೊಮ್ಮೆ ಇಲ್ಲಿ ಗುಂಡಿನ ಸೇವ,ಅನ್ನದ ಕೋಟೆ ಎಂಬ ವಿಶಿಷ್ಟ ಆಚರಣೆ ನಡೆಯುತ್ತದೆ. ಭಕ್ತರು,ಯಾತ್ರಿಕರಿಗೆಸಮುದಾಯ ಭವನ ,ಯಾತ್ರಿನಿವಾಸ ಲಭ್ಯವಿದೆ. ದೇವಾಲಯದ ಸಮೀಪ ಇರುವ ಹೊಂಡವಿದ್ದು ಇದು ತುಂಬಿದಾಗ ಸ್ವಾಮಿಗೆ ತೆಪ್ಪೋತ್ಸವ ನಡೆಸಲಾಗುತ್ತದೆ .ದೇವಸ್ಥಾನಕ್ಕೆ ಸಂಬಂಧಿಸಿದಂತೆ ಕಂಬಶಾಸನ ,1590,1755,1678 ಶಾಸನಗಳು ಲಭ್ಯವಿದೆ.

Share This Article
Leave a Comment

Leave a Reply

Your email address will not be published. Required fields are marked *