ತುಮಕೂರು: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಿನ್ನೆಯಿಂದ ಸಚಿವರು, ಶಾಸಕರ ಸಭೆ ಶುರುವಾಗಿದೆ. ಈ ಸಭೆಯಲ್ಲಿ ನಿನ್ನೆ ರಾತ್ರಿ ತುಮಕೂರಿನ ಸಚಿವರು, ಶಾಸಕರ ಸಭೆ ಆರಂಭವಾಗಿದೆ. ಆದರೆ ಸಭೆಯಲ್ಲಿಯೇ ತುಮಕೂರಿನ ಗುಭಿ ಶಾಸಕ ವಾಸು ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ನಡುವೆ ಜೋರು ಜಟಾಪಟಿ ನಡೆದಿದೆ ಎನ್ನಲಾಗಿದೆ. ಸಭೆ ನಡೆಯುತ್ತಿರುವ ನಡುವಲ್ಲಿಯೇ ಹಾಲಿನ ವಿಚಾರ ಬಂದು ಗಲಾಟೆ ಆಗಿದೆ ಎನ್ನಲಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ನಡೆದ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಸಿಕ್ಕಾಪಟ್ಟೆ ಜಟಾಪಟಿ ನಡೆದಿತ್ತು. ಗುಬ್ಬಿ ವಾಸು ಅವರು ಆ ಸ್ಥಾನಕ್ಕೆ ತಮ್ಮ ಹೆಂಡತಿಯನ್ನು ಕೂರಿಸಬೇಕು ಅಂದುಕೊಂಡಿದ್ದರು. ಆದರೆ ರಾಜಣ್ಣ ಅವರು ಪಾವಗಡ ಶಾಸಕ ವೆಂಕಟೇಶ್ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವಂತೆ ಮಾಡಿದ್ದರು. ಈ ಆಕ್ರೋಶ ರಾತ್ರಿ ಸಭೆಯಲ್ಲಿ ಕಟ್ಟೆಯೊಡೆದಿತ್ತು.
ಹಾಗೆ ಕುಣಿಗಲ್ ಶಾಸಕ ರಂಗನಾಥ್ ನೀರಿನ ವಿಚಾರಕ್ಕೆ ರಾಜಣ್ಣ ವಿರುದ್ಧ ಗರಂ ಆಗಿದ್ದರು. ಈ ಇಬ್ಬರ ಮಾತುಗಳು, ಆರೋಪಗಳನ್ನು ಕೇಳಿದ ರಾಜಣ್ಣ ಕೆಲ ಕಾಲ ಮೌನಿಯಾಗಿದ್ದರು, ಭಾವುಕರಾದ ಕ್ಷಣವೂ ಕಾಣಿಸಿತ್ತು. ಬಳಿಕ ಇದು ಅನಗತ್ಯ ಆರೋಪ ಅಂತಾನು ಗರಂ ಆದ್ರಂತೆ. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು, ಮೂವರಿಗೂ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ. ಒಂದೇ ಜಿಲ್ಲೆಯವರಾಗಿ ಹೀಗೆ ಕಿತ್ತಾಡಿಕೊಂಡು ಕೂತರೆ ಹೇಗೆ..? ಮೊದಲು ಈ ಮನಸ್ತಾಪವನ್ನೆಲ್ಲಾ ಬಿಟ್ಟು ಎಲ್ಲರೂ ಒಂದಾಗಿ ಕೆಲಸ ಮಾಡಿ ಎಂದಿದ್ದಾರಂತೆ. ಸಿಎಂ ಸಂಧಾನ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದನ್ನ ನೋಡಬೇಕಿದೆ.










