Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹಲ್ಲು ಹುಳುಕು ಆಗಲು ಕಾರಣ ಮತ್ತು ಪರಿಹಾರ : ಇಲ್ಲಿದೆ ಸಂಪೂರ್ಣ ಮಾಹಿತಿ….!

---Advertisement---

ವಿಶೇಷ ಲೇಖನ :
ಡಾ ಕೆ ವಿ ಸಂತೋಷ್
ದಂತ ವೈದ್ಯರು
ಹೊಳಲ್ಕೆರೆ 577526.
ಚಿತ್ರದುರ್ಗ ಜಿಲ್ಲೆ.

ಸುದ್ದಿಒನ್

ಮಾನವನ ದೇಹದ ಒಂದು ಪ್ರಮುಖವಾದ ಅಂಗವಾಗಿದ್ದ ಹಲ್ಲುಗಳ ಆರೋಗ್ಯಕ್ಕೆ ದೊಡ್ಡ ಕಂಟಕ ಪ್ರಾಯ ಆಗಿರುವುದೇ ಈ ಹುಳುಕು. ಇಡೀ ದೇಹದಲ್ಲಿ ಅತ್ಯಂತ ಗಟ್ಟಿ ಮುಟ್ಟಾಗಿರುವ ಎನಾಮಲ್ ಹಾಗೂ ಹಲ್ಲಿನ ದೇಹವನ್ನೇ ಪುಡಿ ಪುಡಿ ಮಾಡಿ ಕರಗಿಸಿ ಬಿಡುವ ಹುಳುಕು ಪ್ರಾಚೀನ ಮಾನವನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಇದಕ್ಕಾಗಿ ಪ್ರಾಚೀನ ಮಾನವ ಹಾಗೂ ಪುರಾಣಗಳ ಕಾಲದಲ್ಲಿಯೇ ಈ ಹುಳುಕು ಹಲ್ಲನ್ನು ಸರಿಪಡಿಸುವ ವಿಧಾನಗಳನ್ನು ಕಲಿತಿದ್ದರು ಹಾಗೂ ಅದರ ಬಳಕೆಗೆ ಮುಂದಾಗಿದ್ದರು.

ಸಾವಿರಾರು ವರ್ಷಗಳ ತನಕ ಹಾಳಾಗದೆ ಗಟ್ಟಿತನದಿಂದ ಮಣ್ಣಿನಲ್ಲೂ ಕೂಡ ಸುಲಭವಾಗಿ ಕೊಳೆಯದೆ  ಉಳಿಯುವ ಹಲ್ಲನ್ನು ಕೇವಲ 1-2 ವರ್ಷಗಳಲ್ಲಿಯೇ ಕರಗಿಸಿ ಬಿಡುವ ಹುಳುಕು ಅದೆಷ್ಟು ಪರಿಣಾಮಕಾರಿಯಾಗಿರಬಹುದು ನೀವೇ ಊಹಿಸಿ.
ಕ್ರಿಸ್ತಪೂರ್ವ ಕಾಲದಲ್ಲಿಯೇ ಹಾಗೂ ಶಿಲಾಯುಗದ ಮಾನವನ ಹಲ್ಲುಗಳಲ್ಲೂ ಕೂಡ ಈ ಹುಳುಕು ಪತ್ತೆಯಾಗಿರುವುದು ಇತ್ತೀಚಿನ ವೈಜ್ಞಾನಿಕ ಸಂಶೋಧನೆಯಿಂದ ಧೃಡಪಟ್ಟಿದೆ. ಸಾವಿರಾರು ಶತಮಾನಗಳ ಇತಿಹಾಸ ಇರುವ ಈ ಹುಳುಕುಗಳಿಗೆ ನಮ್ಮ ಹಲ್ಲು ಮತ್ತು ಬಾಯಿಯೇ ವಾಸ ಸ್ಥಳ. ಈ ಹುಳುಕಿಗೆ ಮುಖ್ಯ ಕಾರಣ ಒಂದು ಸೂಕ್ಷ್ಮ ಜೀವಿ ಕ್ರಿಮಿಯಾದ ಸ್ಟ್ರೇಪ್ಟೊಕಾಕಸ್ ನ್ಯೂಟಾನ್ಸ್ (streptococcus mutans ). ಇದರ ಜೊತೆಗೆ ಇತರ ಉಪಸೂಕ್ಷ್ಮ ಜೀವಿಗಳು ಇದ್ದರೂ ಇದು ಮಾತ್ರ ಮುಖ್ಯವಾಗಿ ಕಾರಣವಾಗಿರುತ್ತದೆ.

ಸಾಮಾನ್ಯ ಆರೋಗ್ಯಕರ ಬಾಯಿಯಲ್ಲಿ ಈ ಸೂಕ್ಷ್ಮಾಣು ಜೀವಿಯು ಬಾಯಿ ಮತ್ತು ಜೊಲ್ಲಿನ ಒಳಗಡೆ ಇದ್ದೇ ಇರುತ್ತದೆ. ಆರೋಗ್ಯಕರ ವ್ಯಕ್ತಿಯ ಬಾಯಲ್ಲಿ ಈ ಕ್ರಿಮಿಯು ನಿಸ್ತೇಜ ವಾಗಿದ್ದು ಯಾವುದೇ ಕೆಲಸ ಮಾಡುವುದಿಲ್ಲ ಮತ್ತು ಕಾರ್ಯ ಹೀನ ಸ್ಥಿತಿಯಲ್ಲಿರುತ್ತದೆ.

ಯಾವಾಗ ಬಾಯಿಯ ಪಿಎಚ್ ಮಟ್ಟ ಆಮ್ಲಿಯ ಗುಣ ಲಕ್ಷಣವನ್ನು ಹೊಂದುತ್ತದೆಯೋ, ( ಉದಾಹರಣೆಗೆ ಸಕ್ಕರೆ ಅಂಶದ ವಸ್ತುಗಳಾದ ಚಾಕಲೇಟ್, ಅಂಟು ಪದಾರ್ಥ, ಸಿಹಿ ಪದಾರ್ಥ, ಆಮ್ಲ ಅಂಶದ ಆಹಾರ,ಹುಳಿ ಆಹಾರ ) ಆ ಕೂಡಲೇ ಈ ಸೂಕ್ಷ್ಮ ಜೀವಿಯು ಕಾರ್ಯಪ್ರವೃತ್ತವಾಗಿ ಆಮ್ಲೀಯ ಗುಣಲಕ್ಷಣದಲ್ಲಿ ಮತ್ತಷ್ಟು ವೇಗ ಪಡೆದುಕೊಂಡು ಆಮ್ಲವನ್ನು ಉತ್ಪಾದಿಸಲು ಶುರುಮಾಡುತ್ತದೆ ಮತ್ತು ಹಲ್ಲಿಗೆ ಅಂಟಿಕೊಳ್ಳುತ್ತದೆ. ಆಮ್ಲವನ್ನು ಪ್ರತಿ ಬಾರಿ ಉತ್ಪಾದಿಸಿ ಆ ಭಾಗವನ್ನು ಹಂತ ಹಂತವಾಗಿ ಕರಗಿಸಿ ಕೊನೆಗೆ ಹಲ್ಲನ್ನೇ ಹಾಳು ಮಾಡಿಬಿಡುತ್ತದೆ.ಸಾಮಾನ್ಯವಾಗಿ ಬಾಯಿಯ ಪಿಎಚ್ ಮಟ್ಟವು 7 ಇರಬೇಕು. 7ಕ್ಕಿಂತ ಕಡಿಮೆಯಾದರೆ ಆಮ್ಲೀಯ ಗುಣ ಲಕ್ಷಣ ಹೆಚ್ಚಾದಂತೆ ಅರ್ಥ.

 

ಮುಖ್ಯವಾಗಿ ಈ ಹುಳುಕು ದವಡೆಯ ಹಲ್ಲಿನ ಮೇಲ್ಭಾಗದಲ್ಲಿ ಸುಲಭವಾಗಿ ಅಂಟಿಕೊಳ್ಳುತ್ತದೆ. ಕಾರಣ ದವಡೆ ಹಲ್ಲಿನ ಸುತ್ತಳತೆ ಹೆಚ್ಚು ಮತ್ತು ಅಂಟು ಪದಾರ್ಥ ಕೂರಲು ಅನುಕೂಲವಾಗಿರುವಂತೆ ಇಲ್ಲಿ ವಿಶಾಲವಾಗಿ ಜಾಗ ದೊರಕುತ್ತದೆ.
ಇದಕ್ಕೆ ಹತ್ತಾರು ಕಾರಣಗಳಿದ್ದರೂ ಮುಖ್ಯವಾಗಿ ಹಲ್ಲಿನ ಆರೋಗ್ಯದ ಬಗ್ಗೆ ತಾಳುವ ಆಲಕ್ಷ್ಯ ಮನೋಭಾವದಿಂದ ಹಲ್ಲು ಬೇಗ ಹಾಳಾಗುತ್ತದೆ.
ಹಲ್ಲಿಗೆ ಕಾಡುವ ಪ್ರಮುಖ ಸಮಸ್ಯೆಯೇ ಹುಳುಕು. ಮುಖ್ಯವಾಗಿ ಹುಳುಕು ಹಲ್ಲು ಆಗಲು ಬಹಳಷ್ಟು ಕಾರಣಗಳಿದ್ದರೂ ನಾವು ಅದನ್ನು ಶುರುವಿನಲ್ಲಿ ಗುರುತಿಸಬೇಕು ಮತ್ತು ಹೆಚ್ಚಾಗದಂತೆ ನೋಡಿಕೊಳ್ಳಬೇಕು ಮತ್ತು ಆರೋಗ್ಯಕರ ಸ್ಥಿತಿಯಲ್ಲಿ ಬಾಯಿ ಇಟ್ಟುಕೊಳ್ಳಬೇಕು. ಹಲ್ಲುಗಳಲ್ಲಿ ಮೊದಲಿಗೆ ಆಹಾರ ಕಣ ಸಿಕ್ಕಿ ಬೀಳುವುದು, ಕಚ್ಚುವಾಗ ನೋವು, ಸಂವೇದನೆ,ತಣ್ಣೀರು ಬಿಸಿ ಆಹಾರ ಸೇವನೆ ಮಾಡಿದಾಗ ಹಲ್ಲುಗಳು ಜುಮ್ ಎನ್ನುವ  ಅನುಭವ ಆಗುವುದು… ಇವೆಲ್ಲವೂ ಹಲ್ಲುಗಳು ಹುಳುಕು ಹಿಡಿಯುವುದರ ಲಕ್ಷಣಗಳಾಗಿವೆ.
ಹುಳುಕು ಬಾರದಂತೆ ಅಥವಾ ತಡೆಯಲು ಯಾವುದೇ ಔಷಧಗಳು ಲಭ್ಯವಿಲ್ಲ. ಕೇವಲ ಅದನ್ನು ತಡೆಗಟ್ಟುವುದೇ ಪರಿಹಾರ.

ಕಾರಣ:
* ಹಲ್ಲಿನ ಆರೋಗ್ಯದ ಬಗ್ಗೆ ನಿರ್ಲಕ್ಷ ಭಾವನೆ ತಾಳುವುದು, ಹಲ್ಲಿನ ಸ್ವಚ್ಛತೆ ಕಡೆಗೆ ಗಮನ ನೀಡದಿರುವುದು.
* ಅತಿಯಾದ ಸಿಹಿ ಕಾಫಿ ಟೀ ಸೇವನೆ.
* ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಕಡಿಮೆ ಆಗುವುದು.
* ಮುರಿದ ಹಲ್ಲುಗಳು ಸವೆದ ಹಲ್ಲುಗಳು ವಕ್ರತೆ ಇರುವ ಹಲ್ಲುಗಳು.
* ಅತಿ ಅಂಟು ಪದಾರ್ಥ, ಸಿಹಿ ಪದಾರ್ಥ ಚಾಕಲೇಟ್ ಐಸ್ ಕ್ರೀಮ್ ನ ಬಳಕೆ.
* ಅತಿ ಆಳವಾದ ಅಗಲವಾದ ಹಲ್ಲಿನಲ್ಲಿ ಇರುವ ಜಾಗಗಳು ಗುಂಡಿಯಾಕಾರದ ಮೇಲ್ಭಾಗ.
* ಹಲ್ಲಿನಲ್ಲಿ ಈಗಾಗಲೇ  ಇರುವ ಸಮಸ್ಯೆಗಳು.
* ಅತಿ ಸಂವೇದನೆ ಇರುವ ಹಲ್ಲುಗಳು.

ಹಲ್ಲು ಹುಳುಕು ಹಿಡಿಯದಂತೆ ತಡೆಗಟ್ಟಲು ಮಾಡಬೇಕಾದ ಕ್ರಮಗಳು:

* ಪ್ರತಿದಿನ ತಪ್ಪದೆ ಎರಡು ಬಾರಿ ಹಲ್ಲನ್ನು ಸ್ವಚ್ಛ ಮಾಡಿಕೊಳ್ಳಬೇಕು.
* ಸಿಹಿ ಮತ್ತು ಅಂಟು ಪದಾರ್ಥ ಸೇವನೆಗೆ ಕಡಿವಾಣ ಹಾಕಬೇಕು ಮತ್ತು ಊಟದ ಸಮಯದಲ್ಲಿ ಮಾತ್ರವೇ ಅವುಗಳನ್ನು ಸೇವಿಸಬೇಕು.
* ಪ್ರತಿ ಬಾರಿ ಆಹಾರ ಸೇವಿಸಿದ ನಂತರ ಬಾಯನ್ನು ನೀರಿನಿಂದ ಮುಕ್ಕಳಿಸಬೇಕು.
* ಸಣ್ಣ ಪ್ರಮಾಣದ ಹುಳುಕು ಹಲ್ಲುಗಳು ನಿಮ್ಮ ಗಮನಕ್ಕೆ ಬಂದಾಗ ದಂತ ವೈದ್ಯರಿಂದ ಅವುಗಳನ್ನು ಸರಿಪಡಿಸಿಕೊಳ್ಳುವ ಚಿಕಿತ್ಸೆಗೆ ಮುಂದಾಗಬೇಕು.
* ಹುಳುಕು ಹಲ್ಲುಗಳನ್ನು ಶುರುವಿನಲ್ಲಿಯೇ ಗುರುತಿಸಬೇಕು ಹಾಗೂ ಹೆಚ್ಚಾಗದಂತೆ ಶೀಘ್ರವಾಗಿ ಬಗೆಹರಿಸಬೇಕು.
* ಹಲ್ಲಿನ ಆರೋಗ್ಯಕ್ಕೆ ಅನುಗುಣವಾಗಿ ಉತ್ತಮ ಪೌಷ್ಟಿಕಾಂಶಯುಕ್ತ  ಆಹಾರ ಸೇವನೆ ಮಾಡಬೇಕು.
* ಹಲ್ಲುಗಳ ಸಂಧಿಗಳಲ್ಲಿ ಎಂದಿಗೂ ಕಡ್ಡಿಪಿನ್ನು ಹಾಕಬಾರದು.

ಆಗಾಗ ಪ್ರತಿಯೊಬ್ಬರು ಕನ್ನಡಿಯಲ್ಲಿ ತಮ್ಮ ಹಲ್ಲುಗಳನ್ನು ನೋಡಿಕೊಳ್ಳುತ್ತಿರಬೇಕು ಮತ್ತು ಆ ಹಲ್ಲುಗಳಲ್ಲಿ ಕಪ್ಪು ಚುಕ್ಕೆ ಹುಳುಕು ಆಹಾರ ಕಣ ಸೇರಿಕೊಳ್ಳುತ್ತಿದೆಯಾ ಗಮನಿಸುತ್ತಿರಬೇಕು ಅಥವಾ ದಂತ ವೈದ್ಯರನ್ನು ಪ್ರತಿ ಆರು ತಿಂಗಳಿಗೆ ಒಮ್ಮೆ ಭೇಟಿ ಮಾಡಿ ಹಲ್ಲುಗಳ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment