ರಾಜ್ಯದಲ್ಲಿ ಅಹಿಂದ ನಾಯಕ ಎಂದೇ ಕರೆಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಒಬಿಸಿ ಸಭೆ ನಡೆಯುತ್ತಿದೆ. ಎಐಸಿಸಿ ಮಟ್ಟದಲ್ಲಿ ಒಬಿಸಿ ನಾಯಕ ಸ್ಥಾನ ಪಡೆದ ಮೇಲೆ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಈ ಸಭೆಯ ಪ್ರಮುಖ ಉದ್ದೇಶ, ಹಿಂದುಳಿದ ವರ್ಗಗಳನ್ನು ಒಟ್ಟುಗೂಡಿಸಿ, ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳಲು ಹೋರಾಟ ರೂಪಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.
ಬಹಳ ಮುಖ್ಯವಾಗಿ 2029ರ ಚುನಾವಣೆಯ ಮೇಲೂ ಕಾಂಗ್ರೆಸ್ ಗಮನ ಹರಿಸಿದ್ದು, ಅಲ್ಲಿ ಹಿಂದುಳಿದ ಸಮುದಾಯದ ಮತಗಳನ್ನು ಸೆಳೆಯುವುದಕ್ಕೆ ಈಗಿನಿಂದಲೇ ಪ್ಲ್ಯಾನ್ ರೂಪಿಸಿದೆ. ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎರಡು ದಿನಗಳ ಸಭೆ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿಯೇ ಈ ಸಭೆ ನಡೆದಿದ್ದು, ಸಭೆ ಬಳಿಕ ಎಲ್ಲಾ ನಾಯಕರು ಫೋಟೋಗೆ ಪೋಸ್ ಕೂಡ ನೀಡಿದ್ದಾರೆ.
ಸಭೆ ಬಳಿಕ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಅಹಿಂದ ಒಂದು ಮತ ಬ್ಯಾಂಕ್ ಅಲ್ಲ. ಇದು ಭಾರತದ ಆತ್ಮಸಾಕ್ಷಿಯ ಧ್ವನಿ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಮತ್ತು ಸರ್ವೋದಯ ತತ್ವದಲ್ಲಿ, ಯಾರೂ ಹಿಂದೆ ಉಳಿಯದ, ಎಲ್ಲರೂ ಒಟ್ಟಿಗೆ ಏಳುವ ಭಾರತವನ್ನು ಕಟ್ಟೋಣಾ ಎಂದು ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕರೆ ನೀಡಿದ್ದಾರೆ.
ಈ ಸಭೆಗೆ ಐವರು ಸಚಿವರಿಗೂ ಅವಕಾಶ ಸಿಕ್ಕಿದೆ. ಸಚಿವ ಮಧು ಬಂಗಾರಪ್ಪ, ಸಂತೋಷ್ ಲಾಡ್, ಮಂಕಾಳ್ ವೈದ್ಯ, ಭೈರತಿ ಸುರೇಶ್, ಎನ್ ಎಸ್ ಬೋಸರಾಜು ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. 90 ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ಸಭೆಯಲ್ಲಿ ಹಲವು ನಿರ್ಣಯಗಳನ್ನ ಕೈಗೊಳ್ಳಲಾಗುತ್ತದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






