ಚಿತ್ರದುರ್ಗ, ಜುಲೈ. 08 : ದುರ್ಗೋತ್ಸವ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಪ್ರಸ್ತಾವ ಸಲ್ಲಿಸಿದರೆ ನಿಶ್ವಿತವಾಗಿ ದುರ್ಗೋತ್ಸವ ಆಚರಣೆ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು.
ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ವಸತಿ ಗೃಹ ಬಳಿ ಇರುವ ಎಸ್. ನಿಜಲಿಂಗಪ್ಪನವರ ನಿವಾಸಕ್ಕೆ ಹಾಗೂ ತಾಲ್ಲೂಕಿನ ಸೀಬಾರದ ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಗೆ ಭೇಟಿ ನೀಡಿ, ಎಸ್. ನಿಜಲಿಂಗಪ್ಪನವರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ, ನಂತರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕನ್ನಡ ಪರ ಸಂಘಟನೆಗಳು ದುರ್ಗೋತ್ಸವ ಆಚರಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಾರಿ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ರೈತರು ಸಂತಸದಿಂದಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ಸವಗಳ ಆಚರಣೆ ಮಾಡುವುದು ತಪ್ಪಲ್ಲ. ಈ ಹಿಂದೆ ಎರಡು ಬಾರಿ ಐತಿಹಾಸಿಕ ಹಿನ್ನಲೆಯ ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಯೋಜಿಸಲಾಗಿತ್ತು ಎಂದು ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರು ಗಮನಕ್ಕೆ ತಂದಿದ್ದಾರೆ.
ಮುಖ್ಯಮಂತ್ರಿಗಳು ಸಹ ದುರ್ಗೋತ್ಸವಕ್ಕೆ ಆಚರಣೆಗೆ ಅವಕಾಶ ಹಾಗೂ ಸಹಕಾರ ನೀಡುತ್ತಾರೆ ಎಂಬ ಭರವಸೆ ಇದೆ. ಹೀಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಸಚಿವರು ಹೇಳಿದರು.


