ಶಿವಮೊಗ್ಗ: ಜಗತ್ತು ಎಷ್ಟೇ ಬದಲಾದರೂ ಇನ್ನು ಕೆಲವರು ಬದಲಾಗಿಲ್ಲ. ಅದರಲ್ಲೂ ಮೂಢನಂಬಿಕೆ ವಿಚಾರದಲ್ಲಂತೂ ಕೆಲವರು ಬದಲಾಗಿಯೇ ಇಲ್ಲ. ಮೂಢನಂಬಿಕೆಯನ್ನ ಈಗಲೂ ಪಾಲಿಸುತ್ತಲೇ ಇದ್ದಾರೆ. ಇದೇ ಮೂಢನಂಬಿಕೆಯಿಂದಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ದೆವ್ವ ಬಿಡಿಸ್ತೀನಿ ಎಂಬ ನೆಪದಲ್ಲಿ ಮಂತ್ರವಾದಿ ಮಾಡಿದ ಅವಾಂತರಕ್ಕೆ ಶಿವಮೊಗ್ಗದ ಭದ್ರಾವತಿಯ ಮಹಿಳೆ ಸಾವಾಗಿದೆ.
ಭದ್ರಾವತಿ ತಾಲೂಕಿನ ಜಂಬರಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಂಬರಘಟ್ಟದ 35 ವರ್ಷದ ಗೀತಾ ಎಂಬ ಮಹಿಳೆ ಮಂತ್ರವಾದಿಯ ಹೊಡೆತಕ್ಕೆ ಜೀವ ಬಿಟ್ಟಿದ್ದಾಳೆ. ಗೀತಾಗೆ ದೆವ್ವ ಹಿಡಿದಿತ್ತು ಎಂದು, ಆಶಾ ಎಂಬ ಮಹಿಳೆ ದೆವ್ವ ಬಿಡಿಸುವುದಕ್ಕೆ ಮುಂದಾಗಿದ್ದಾಳೆ. ದೆವ್ವ ಬಿಡಿಸುತ್ತೇನೆಂದು ಕೋಲಿನಿಂದ ಹೊಡೆಯುವುದಕ್ಕೆ ಶುರು ಮಾಡಿದ್ದಾರೆ. ಈ ಹೊಡೆತದಿಂದ ಗೀತಾ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಬೆಳಗ್ಗೆ ಆ ನೋವಿನಿಂದಲೇ ಜೀವ ಬಿಟ್ಟಿದ್ದಾರೆ.
ಗೀತಾ, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಮನೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸದೆ, ಮಂತ್ರವಾದಿಯ ಬಳಿ ಕರೆದುಕೊಂಡು ಬಂದಿದ್ದಾರೆ. ಆಗ ಆಶಾ ತಮ್ಮಲ್ಲಿಂದ ಕೋಲಿನಿಂದ, ನಿಂಬೆ ಹಣ್ಣಿನಿಂದ ಹೊಡೆದಿದ್ದಾರೆ. ಗೀತಾ ಆರೋಗ್ಯವಾಗಿಯೇ ಇದ್ದರು. ಆದರೆ ಕಳೆದೆರಡು ದಿನದಿಂದ ಮಾತ್ರ ಸ್ವಲ್ಪ ಆರೋಗ್ಯ ಕೈಕೊಟ್ಟಿತ್ತು. ಆಕೆಯ ಮಗ ನಕಲಿ ಮಂತ್ರವಾದಿ ಬಳಿ ಕರೆದುಕೊಂಡು ಹೋಗಿದ್ದಾರೆ.

ಆಶಾ, ಕಳೆದ ಕೆಲವು ಚೌಡಮ್ಮ ಬರುತ್ತಾಳೆ ಎಂದು ಹೇಳಿಕೊಂಡು ತಿರುಗಾಡೋದಕ್ಕೆ ಶುರು ಮಾಡಿ ಕೇವಲ ಹದಿನೈದು ದಿನ ಕೂಡ ಆಗಿಲ್ಲ. ಆದ್ರೆ ಈಗ ನೋಡಿದ್ರೆ ಒಂದು ಹೆಣ್ಣು ಮಗಳ ಜೀವವೇ ಹೋಗಿದೆ. ಈ ಘಟನೆ ಸಂಬಂಧ ಹೊಳೆ ಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
















