ಚಿತ್ರದುರ್ಗ, ಜು.05 :ಅಲೆಮಾರಿಗಳು ಅಸ್ಪೃಶ್ಯತೆ ನೋವಿನ ಜೊತೆಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದ್ದು, ಅವರನ್ನು ಮುಖ್ಯವಾಹಿನಿಗೆ ತರಲು ಒಳಮೀಸಲಾತಿಯಲ್ಲಿ ಈ ವರ್ಗಕ್ಕೆ ಪ್ರತ್ಯೇಕ ಮೀಸಲಾತಿ ಗುಂಪು ರಚಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದರು.
ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ವೇದಿಕೆ ಬೆಂಗಳೂರಿನ ಗಾಂಧಿಭವನದಲ್ಲಿ ಶನಿವಾರ ಆಯೋಜಿಸಿದ್ದ ಅಲೆಮಾರಿ ರಾಜ್ಯಮಟ್ಟದ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿರುವ 49ಕ್ಕೂ ಹೆಚ್ಚು ಸೂಕ್ಷ್ಮ, ಅತೀ ಸೂಕ್ಷ್ಮ ಜಾತಿಯಲ್ಲಿ ಗುರುತಿಸಿಕೊಂಡಿರುವ ಅಲೆಮಾರಿಗಳ ಬದುಕು ನಾಗರಿಕ ಪ್ರಪಂಚನವನ್ನೇ ಅಣಕಿಸುವ ರೀತಿ ಇದೆ. ಸುಡಗಾಡುಸಿದ್ದ, ದಕ್ಕಲಿಗೆ, ಬುಡ್ಗಜಂಗಮ, ದೊಂಬರು, ಹಂದಿಜೋಗಿ, ಸಿಂದೋಳು ಸೇರಿ ಅನೇಕ ಜಾತಿಗಳು ಅಲೆದಾಟದಲ್ಲಿಯೇ ನಿಕೃಷ್ಠ ಬದುಕು ನಡೆಸುತ್ತಿವೆ. ಈ ಸಮುದಾಯಕ್ಕೆ ನೆಲೆ ಒದಗಿಸುವ ಬಹುದೊಡ್ಡ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ ಎಂದರು.
ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಿ, ಅಹಿಂದ ವರ್ಗದ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ, ಪ್ರಮುಖ ಬೇಡಿಕೆಗಳನ್ನು ಅವರ ಗಮನಕ್ಕೆ ತರುವ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.
ಸದಾಶಿವ, ಮಾಧುಸ್ವಾಮಿ ಸೇರಿ ಎಲ್ಲ ಆಯೋಗಗಳು ಈ ವರ್ಗದ ಜನರ ನಿಕೃಷ್ಠ ಬದುಕನ್ನು ಗುರುತಿಸಿ, ಅವರಿಗೆ ಮೀಸಲಾತಿ ಸೌಲಭ್ಯ ತಲುಪಿಸಲು ಪ್ರತ್ಯೇಕ ಗುಂಪು ಅಗತ್ಯವೆಂದು ಅಭಿಪ್ರಾಯಪಟ್ಟಿವೆ. ಆದ್ದರಿಂದ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿ, ಧ್ವನಿಯಿಲ್ಲದ ಈ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದರೆ ಸಿದ್ದರಾಮಯ್ಯ ಈ ಜನರಿಗೆ ನ್ಯಾಯ ಒದಗಿಸಲು ಬದ್ಧರಾಗಿದ್ದಾರೆ ಎಂದರು.
ರಾಜ್ಯದಲ್ಲಿ ಈಗ ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜಾತಿಗಣತಿ ಸಮೀಕ್ಷೆ ಕೂಡ ನಡೆದಿದೆ. ಆದ್ದರಿಂದ ಸರ್ಕಾರಕ್ಕೆ ವರದಿ ಸಲ್ಲಿಸುವ ಸಂದರ್ಭ ಒಳಮೀಸಲಾತಿಯಲ್ಲಿ ಈ ಸಮುದಾಯಗಳಿಗಾಗಿ ಪ್ರತ್ಯೇಕ ಗುಂಪು ರಚಿಸಬೇಕು. ಇಲ್ಲದಿದ್ದರೆ ಪರಿಶಿಷ್ಟ ಜಾತಿಯಲ್ಲಿನ ಬಲಾಢ್ಯರ ಮಧ್ಯೆ ಈ ಅಲೆಮಾರಿಗಳು ಕಳೆದುಹೋಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ವತಂತ್ರ ಬಂದು ಇಷ್ಟು ವರ್ಷವಾದರೂ ಸಂವಿಧಾನಾತ್ಮಕ ಮೀಸಲಾತಿ ಸೌಲಭ್ಯ ಪಡೆಯುವಲ್ಲಿ ವಿಫಲವಾಗಿವೆ. ಆದ್ದರಿಂದ ಈ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಮನೆ, ಭೂಮಿ, ನಿವೇಶನ, ಶಿಕ್ಷಣ, ಉದ್ಯೋಗ, ಸಾಲ ಸೌಲಭ್ಯ ಒದಗಿಸಲು ಹೆಚ್ಚು ಆಸಕ್ತಿ ವಹಿಸಬೇಕು. ಇದಕ್ಕೆಲ್ಲ ಪರಿಹಾರ ಒಳಮೀಸಲಾತಿಯಲ್ಲಿ ಪ್ರತ್ಯೇಕ ಗುಂಪು ರಚನೆಯಿಂದ ಸಾಧ್ಯವಾಗಲಿದೆ ಎಂದರು.
ಸಾಹಿತಿ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಅಲೆಮಾರಿ ಸಮುದಾಯಗಳ ಕುರಿತು ಎಲ್ಲ ವರ್ಗದ ಜನರು ಕರುಣೆ ಜೊತೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಹೋರಾಟ ನಡೆಸಲೇಬೇಕಾಗಿದೆ. ಆದ್ದರಿಂದ ಮೊದಲು ನಿಮ್ಮಲ್ಲಿ ಒಗ್ಗಟ್ಟು ಗಟ್ಟಿ ಮಾಡಿಕೊಳ್ಳಿ ಎಂದು ತಿಳಿಸಿದರು.
ಮಾಜಿ ಸಚಿವ ಎಚ್.ಆಂಜನೇಯ ಅವರು ಅಸ್ಪೃಶ್ಯ ಜಾತಿಗಳ ಕುರಿತು ಹೆಚ್ಚು ಕಾಳಜಿ ಹೊಂದಿರುವ ನಾಯಕರು. ಅವರ ನೇತೃತ್ವದಲ್ಲಿ ನೀವುಗಳು ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ಮುನ್ನುಗ್ಗುತ್ತಿರುವುದು ಉತ್ತಮವಾದ ನಡೆ ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಬಾಲಗುರುಮೂರ್ತಿ ಮಾತನಾಡಿ, ನಾವೆಲ್ಲರೂ ಒಗ್ಗಟ್ಟು ಮೂಲಕ ಹಕ್ಕುಗಳನ್ನು ಪಡೆಯಬೇಕಾಗಿದೆ. ಸಮುದಾಯಗಳ ಕುರಿತು ಅಧ್ಯಯನ ಕೈಗೊಳ್ಳಬೇಕಿದೆ ಎಂದರು.
ಪೂರ್ವಭಾವಿ ಸಭೆ ಯಶಸ್ವಿ ನಮ್ಮಲ್ಲಿ ಉತ್ಸಾಹ ತುಂಬಿದೆ. ಮುಂದಿನ ದಿನಗಳಲ್ಲಿ ವಿವಿಧ ಸಭೆ, ಸಮಾರಂಭ, ಸಮಾವೇಶದ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸುವುದು ಅಗತ್ಯವಿದೆ ಎಂದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಸಂಘಟಕರಾದ ಶಾಂತಕುಮಾರ್, ಸಣ್ಣಮಾರಣ್ಣ ಇತರರಿದ್ದರು.


