ಸುದ್ದಿಒನ್, ಹಿರಿಯೂರು, ಜೂನ್. 27 : ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಯುಕ್ತ ಜನತಾದಳ ಕರ್ನಾಟಕ, ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಅಧ್ಯಕ್ಷತೆಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾ ಗೋಷ್ಠಿ ಉದ್ದೇಶಿಸಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ ಡಾ. ಕೆ. ನಾಗರಾಜ ಅವರನ್ನು ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಕಳೆದ ಆರು ತಿಂಗಳಿಂದ ಐದು ಜಿಲ್ಲೆಗಳಲ್ಲಿ ಸಂಚರಿಸಿ ಮತದಾರರನ್ನು ಭೇಟಿ ಮಾಡುತ್ತಿದ್ದೇವೆ. ಉತ್ತಮ ಸ್ಪಂದನೆ ದೊರೆತಿದ್ದು, ಚಿತ್ರದುರ್ಗದ ಕುಂಬಾರ ಗುರುಪೀಠ ಪೀಠಾಧ್ಯಕ್ಷರಾದ ಬಸವ ಮೂರ್ತಿ ಗುಂಡಯ್ಯ ಸ್ವಾಮಿಗೆ ನಮಗೆ ಬೆಂಬಲ ನೀಡಿ, ಜೊತೆಗಿದ್ದಾರೆ. ನಮ್ಮದು ಸರ್ವೋದಯ ಸಿದ್ಧಾಂತವಾಗಿದ್ದು, ಕುಂಬಾರ ಶ್ರೀಗಳಂತೆ ರಾಜ್ಯದ ಎಲ್ಲಾ ಮಠಗಳ ಶ್ರೀಗಳು ನಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ತಿಳಿಸಿದರು.
ಕೆಆರ್.ಎಸ್. ಮತ್ತು ಆಮ್ ಆದ್ಮಿ ಪಕ್ಷದ ನಮಗೆ ಬೆಂಬಲ ನೀಡಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವತ್ತಾ ನಾವು ಮುನ್ನೆಡೆಯೋಣ ಎಂದರು.
ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಬಾಂಧವ್ಯ ಇರಬೇಕು. ಕೃಷಿ, ಶಿಕ್ಷಣ, ಆರೋಗ್ಯ, ಪರಿಸರ ಆಡಳಿತದಂತಹ ಐದು ವಿಷಯಗಳನ್ನು ಮುಖ್ಯವಾಗಿ ಪರಿಗಣಿಸಿದ್ದೆವೆ. ಅಭಿವೃದ್ಧಿಯ ವಿಷಯದಲ್ಲಿ ಬಾಂಧವ್ಯ ಬೆಳೆಸಿಕೊಳ್ಳಬೇಕು ಆಗ ಮಾತ್ರ ಜನರಿಗೆ ಏನಾದರೂ ಕೊಡುಗೆ ಕೊಟ್ಟಂತಾಗುತ್ತದೆ ಎಂದು ತಿಳಿಸಿದರು.
ಇತ್ತಿಚಿನ ದಿನಮಾನಗಳಲ್ಲಿ ರಾಜಕಾರಣ ಯಾವರೀತಿ ಇದೆ. ಆಡಳಿತ ವ್ಯವಸ್ಥೆ ಹೇಗಿದೆ ಎಂದು ನೋಡಿದರೆ ಆತಂಕವಾಗುತ್ತೆ. ಇವತ್ತಿನ ಪರಿಸ್ಥಿತಿ ಸರಿಯಾದ ದಿಕ್ಕಿನಲ್ಲಿ ಇಲ್ಲ ಎಂದು ಹೇಳುವವರು ಸರಿಯಾದ ದಿಕ್ಕು ತೋರಿಸುತ್ತಿಲ್ಲ. ರಾಜಕಾರಣ ದಾರಿ ತಪ್ಪಲು ಉಪಯೋಗ ಕಾರಣ, ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ಗೆದ್ದವರು ಮತ್ತೆ ಕೋಟಿಗಟ್ಟಲೆ ಹಣ ದುಡಿಯುತ್ತಾರೆಂದು ಆತಂಕ ವ್ಯಕ್ತಪಡಿಸಿದರು.
ಯುವ ಜನತಾದಳ ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ಅಭ್ಯರ್ಥಿ ಡಾ. ಕೆ. ನಾಗರಾಜ ಮಾತನಾಡಿ ನನ್ನ ಮೇಲೆ ವಿಶ್ವಾಸ ನಂಬಿಕೆ ಇಟ್ಟು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಟಿಕೆಟ್ ನೀಡಿದ ಪಕ್ಷದ ನಾಯಕರಿಗೆ ಧನ್ಯವಾದಗಳು ತಿಳಿಸುತ್ತಾ, ಜೆಡಿಯು ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ಹೆಮ್ಮೆಯ ವಿಷಯ, 2014 ಮತ್ತು 2017ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿಗಿಂತ ಹೆಚ್ಚು ಮತ ಪಡೆದು ಕೆಲವು ಮತಗಳಿಂದ ಸೋಲಬೇಕಾಯಿತು. ಆದರೂ ಸೋಲಿಗೆ ಎದೆಗುಂದದೆ ಮತ್ತೆ ಅಖಾಡಕ್ಕೆ ಇಳಿದಿದ್ದೇನೆ. ಅನುದಾನಿತ ಶಿಕ್ಷಕರ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. 2014ರಿಂದಲೂ ಅತಿಥಿ ಶಿಕ್ಷಕರ ಹೋರಾಟಗಳನ್ನು ಬೆಂಬಲಿಸಿ ಕೊಂಡು ಬಂದಿದ್ದೇನೆ ಎಂದರು.

60% ಕ್ಕಿಂತ ಕಡಿಮೆ ಫಲಿತಾಂಶ ಬಂದ ಸರ್ಕಾರಿ ಶಾಲೆಗಳಿಗೆ ಸರ್ಕಾರ ಅನುದಾನ ಕಡಿತಗೊಳಿಸುವ ಸುತ್ತೋಲೆ ಹೊರಡಿಸಿದೆ. ಇದು ಅವೈಜ್ಞಾನಿಕವಾಗಿದೆ. ಫಲಿತಾಂಶದಲ್ಲಿ ಕೇವಲ ಶಿಕ್ಷಕರ ಪಾತ್ರ ವಲ್ಲದೆ ವಿದ್ಯಾರ್ಥಿಗಳು ಓದಬೇಕು ಜೊತೆಗೆ ಪೋಷಕರ ಸಹಾಕರವೂ ಮುಖ್ಯವಾಗಿದೆ. ಈ ಕೂಡಲೇ ಸರ್ಕಾರ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಡಾ. ಕೆ. ನಾಗರಾಜ ಒತ್ತಾಯಿಸಿದರು.
ಕುಂಬಾರ ಗುರುಪೀಠ ಶ್ರೀ ಬಸವ ಮೂರ್ತಿ ಗುಂಡಯ್ಯ ಸ್ವಾಮಿಜಿ ಮಾತನಾಡಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗಡೆ ಹಾಗೂ ಜೆಹೆಚ್. ಪಟೇಲ್ ಅವರ ಕಾಲದಲ್ಲಿದ್ದ ರಾಜಕೀಯ ಈಗಿಲ್ಲ. ರಾಜಕೀಯ ಆದಗೆಟ್ಟಿದ್ದು, ಅಕ್ರಮ, ಅನ್ಯಾಯ, ಮೋಸ ನಡೆಯುತ್ತಿದೆ. ಗ್ಯಾರಂಟಿ ಯೋಜನೆ ಜಾರಿಗೆ ತಂದು ಎಲ್ಲಾ ಅಭಿವೃದ್ಧಿ ನಿಂತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಯು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ದಾವಣಗೆರೆ ಜಿಲ್ಲಾಧ್ಯಕ್ಷ ಜಯಣ್ಣ, ಮುಖಂಡರಾದ ಪ್ರಕಾಶ್ ಮಾಣಿಕ್, ನಾರಾಯಣಸ್ವಾಮಿ ಗೌಡ, ಕುಮಾರಸ್ವಾಮಿ, ಸುಮಾ, ಮಲ್ಲಮ್ಮ, ಯಶೋಧಾ, ಕಲಾವತಿ, ರಂಗನಾಥ್, ಕೆಆರ್.ಎಸ್ ಪಕ್ಷದ ಮುಖಂಡ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.



















