ಹಿರಿಯೂರು: ಇತರೆ ಸಮಾಜಗಳಿಗೆ ನ್ಯಾಯ ಕಲ್ಪಿಸುವ ಉದ್ದೇಶದಿಂದ ಅಜಯ್ ಕುಮಾರ್ ಅವರನ್ನು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಚಿವರು ಸೂಚಿಸಿದ್ದಾರೆ. ಆದರೆ ರಾಜೀನಾಮೆ ನೀಡದೇ ಅಧಿಕಾರದ ದುರಾಸೆಯಿಂದ ಸಚಿವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಪಿಆರ್. ದಾಸ್ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕಾಡುಗೊಲ್ಲ ಸಮುದಾಯ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿ, ಅಜಯ್ ಕುಮಾರ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಕೆಪಿಸಿಸಿ ಓಬಿಸಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ತಿಪ್ಪೇಸ್ವಾಮಿ ಮಾತನಾಡಿ ಕಳೆದ 20 ವರ್ಷಗಳಿಂದ ಸಚಿವ ಡಿ ಸುಧಾಕರ್ ಅವರಿಗೆ ಕಾಡುಗೊಲ್ಲರು ಅಥವಾ ಗೊಲ್ಲರು ನಿಮಗೆ ಮತ ನೀಡುವುದಿಲ್ಲ ಅವರನ್ನು ಹತ್ತಿರಕ್ಕೆ ಸೇರಿಸಬೇಡಿ ಎಂದು ಸಚಿವರಿಗೆ ನಮ್ಮ ಸಮುದಾಯದ ವಿರುದ್ಧ ಇಲ್ಲಸಲ್ಲದ ಸುಳ್ಳು ಹೇಳಿ, ದ್ವೇಷ ಸಾಧಿಸುವ ವ್ಯಕ್ತಿ ಅಜಯ್ ಕುಮಾರ್ ಅವರೇ, ನಿನ್ನ ರಾಜಕೀಯ ಲಾಭಕ್ಕಾಗಿ ಸಚಿವರ ವಿರುದ್ಧ ಆರೋಪಗಳನ್ನು ಮಾಡುವುದು ಬಿಡಬೇಕು. ಆರು ತಿಂಗಳ ಅವಧಿಗೆ ನಿಮ್ಮನ್ನು ನಗರಸಭೆ ಅಧ್ಯಕ್ಷರನ್ನಾಗಿ ಮಾಡಲು ಒಡಂಬಡಿಕೆ ಮಾಡಿಕೊಂಡು ಅವಕಾಶ ಕಲ್ಪಿಸಲಾಗಿದೆ. ಬೇರೆಯವರಿಗೆ ಅವಕಾಶ ಕಲ್ಪಿಸಲು ರಾಜೀನಾಮೆ ಕೇಳಿದ್ರೆ ಹಗರಣಗಳನ್ನು ಬಯಲಿಗೆಳೆಯುವೆ ಎಂದು ಹೆದರಿಸುತ್ತಿಯಾ ಎಂದು ಪ್ರಶ್ನಿಸಿದರು. ನಿನ್ನ ಗೊಡ್ಡು ಬೆದರಿಕೆಗೆ ಸಚಿವರು ಬಗ್ಗುವುದಿಲ್ಲ ಮೊದಲು ಈ ಕೂಡಲೇ ರಾಜೀನಾಮೆ ನೀಡಿ ಇರುವ ಗೌರವವನ್ನು ಉಳಿಸಿಕೊಳ್ಳಿ ಎಂದು ಆಗ್ರಹಿಸಿದರು.
ಜೆಜಿ ಹಳ್ಳಿ ಕೇಶವ್ ಮಾತನಾಡಿ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ತಮ್ಮ ಘನತೆಗೆ ತಕ್ಕಂತೆ ರಾಜೀನಾಮೆ ನೀಡಬೇಕು. ಸಚಿವರ ವಿರುದ್ಧ ಸುಖಾಸುಮ್ಮನೆ ಮನಸಿಗೆ ತೋಚಿದ್ದು ಆರೋಪಗಳನ್ನು ಮಾಡಿದರೆ ನಾವು ಸಹಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಚಿತ್ರ ಜಿತ್ ಯಾದವ್, ಕಾಂಗ್ರೆಸ್ ಮುಖಂಡ ಬೀರೆನಹಳ್ಳಿ ಷಡಕ್ಷರಿ, ಪಾಲಾಕ್ಷ ಯಾದವ್, ಕಿಟ್ಟಿ, ಮಹೇಶ್ ಸೇರಿದಂತೆ ಮತ್ತಿತರರು ಇದ್ದರು.
















