ಬೆಂಗಳೂರು; ಆರ್ಸಿಬಿ ಸಂಭ್ರಮಾಚರಣೆಯ ಬಳಿಕ ಆದ ಅನಾಹುತಕ್ಕೆ ಎಲ್ಲರೂ ಬೇಸರದಲ್ಲಿದ್ದಾರೆ. ಇದೀಗ ಗೃಹ ಸಚಿವ ಖಾತೆಯನ್ನ ಬದಲಾಯಿಸಬೇಕೆಂದು ಜಿ ಪರಮೇಶ್ವರ್ ಅವರೇ ಒತ್ತಾಯಿಸುತ್ತಿದ್ದಾರೆ ಎಂಬ ವಿಚಾರ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಗೃಹ ಸಚಿವ ಪರಮೇಶ್ವರ್ ಅವರೇ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಗೃಹ ಖಾತೆ ಬೇಡ ಎಂಬ ನಿರ್ಧಾರಕ್ಕೆ ಪರಮೇಶ್ವರ್ ಅವರು ಬಂದಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಈ ಬಗ್ಗೆ ಮಾಧ್ಯಮ ಸ್ನೇಹಿತರಿಗೆ ಏನ್ ಹೇಳಬೇಕು ಅಂತ ತಿಳೀತಾ ಇಲ್ಲ. ಯಾರೂ ಈ ಬಗ್ಗೆ ನಿಮಗೆ ಹೇಳಿದ್ದು. ಮೂಲ ಯಾವುದು..? ತಿಮ್ಮೇಗೌಡನು ಹೇಳೋದೆ, ಬೊಮ್ಮೆಗೌಡನು ಹೇಳೋದೆ. ಒಂದು ವೇಳೆ ನಿಮ್ಮ ಕಿವಿಗೆ ಬಿತ್ತು ಅಂತ ಇಟ್ಕೊಳೋಣಾ. ನನ್ನನ್ನ ನೇರವಾಗಿ ಕೇಳಿ ನೇರವಾಗಿ ಕ್ಲಾರಿಫೈ ಮಾಡಬಹುದು ಅಲ್ವಾ. ಮಾಧ್ಯಮದಲ್ಲಿ ಹಾಕಿ ನಮ್ಮನ್ನ ಕೊಲೆ ಮಾಡುವ ಬದಲು ನನ್ನನ್ನೇ ನೇರವಾಗಿ ಕೇಳಬಹುದಿತ್ತಲ್ಲ.

30 ವರ್ಷದ ರಾಜಕೀಯದಲ್ಲಿ ಮಾಧ್ಯಮದವರತ್ರ ಬಹಳ ಸಂಯಮದಿಂದ ನಡೆದುಕೊಂಡಿದ್ದೀನಿ. ನೀವೂ ಕೂಡ ಅಷ್ಟೇ ಗೌರವದಿಂದ ನಡೆದುಕೊಂಡಿದ್ದೀರಿ. ಅದಕ್ಕೆ ನಾನು ಆಭಾರಿಯಾಗಿದ್ದೇನೆ. ಆದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನ ಕೊಲೆ ಮಾಡೋದು ಇದೆಯಲ್ಲ, ಅದು ನಿಮಗೂ ಒಳ್ಳೆಯದಾಗಿ ಕಾಣಿಸೋದಿಲ್ಲ, ಶೋಭೆ ತರುವುದಿಲ್ಲ. ನನ್ನ ಶ್ರೀಮತಿ ಅವರತ್ರಾನು ಪಾಲಿಟಿಕ್ ಮಾತನಾಡುವುದಿಲ್ಲ. ಆಪ್ತರತ್ರ ಹೇಳಿದ್ರು, ಖಾತೆ ಬದಲಾಯಿಸಿ ಅಂತ ಹೇಳಿದ್ರು. ಮುಖ್ಯಮಂತ್ರಿ ಅವರ ಬಳಿ ಕೇಳಿದ್ರು. ಅವರು ಆಗಲ್ಲ ಸುಮ್ಮನೆ ಇದ್ದುಬಿಡಿ ಅಂದ್ರು. ಏನಿದು, ಯಾರು ಹೇಳಿದ್ದು..? ನಿಮ್ಗೆ ಹೇಳಿದ್ದೀನಾ ನಾನು. ಈಗಲ್ಲ ಕ್ಲಾರಿಫಿಕೇಷನ್ ತಗೋಳೋದಲ್ಲ. ಮೀಡಿಯಾದಲ್ಲಿ ಹಾಕಿ ಅದ್ವಾನ ಮಾಡಿದ ಮೇಲೆ ಏನು ಕ್ಲಾರಿಫಿಕೇಷನ್ ಕೇಳ್ತೀರಾ. ಈ ರೀತಿ ಕೆಲಸವನ್ನ ದಯವಿಟ್ಟು ಮಾಡಬೇಡಿ. ನಿಮ್ಮ ಕೈ ಮುಗಿದು ಕೇಳಿಕೊಳ್ತೇನೆ. ಯಾಕಂದ್ರೆ ನಾವೂ ಬೇರೆ ಉದ್ದೇಶದಿಂದ ರಾಜಕೀಯಕ್ಕೆ ಬಂದಿರ್ತೇವೆ. ನಮ್ಮನ್ನು ಫಾಲೋ ಮಾಡೋ ಜನ ಇದ್ದಾರೆ. ಅಭಿಮಾನಿಗಳಿದ್ದಾರೆ. ನಮ್ಮ ಕ್ಷೇತ್ರದ ಮತದಾರರು ಏನು ಅಂದುಕೊಳ್ಳುತ್ತಾರೆ ಎಂದು ಪರಮೇಶ್ವರ್ ಬೇಸರ ಹೊರ ಹಾಕಿದ್ದಾರೆ.















