Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನರ್ಸಿಂಗ್ ವೃತ್ತಿ ಪವಿತ್ರವಾದುದು : ಡಾ.ಭಗವಾನ್

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್. 07 : ನರ್ಸಿಂಗ್ ವೃತ್ತಿ ಪವಿತ್ರವಾದುದು. ತಾಳ್ಮೆ, ಸಹನೆ, ಪ್ರೀತಿಯಿಂದ ರೋಗಿಗಳ ಹಾರೈಕೆ ಮಾಡಿ ಎಂದು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ. ನರ್ಸಿಂಗ್ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೋಟೆ ರಸ್ತೆಯಲ್ಲಿರುವ ರಾಘವೇಂದ್ರ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ನೂತನ ಕಟ್ಟಡ ಉದ್ಘಾಟನೆ, ಹೊಸ ಬೆಳಕು ಕಾಲೇಜು ವಾರ್ಷಿಕೋತ್ಸವ ಮತ್ತು ಲ್ಯಾಂಪ್ ಲೈಟಿಂಗ್ ಸೆರಮನಿ ಉದ್ಗಾಟಿಸಿ ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಉತ್ತಮ ನರ್ಸ್ ಗಳಾಗಿ ಹೊರ ಹೊಮ್ಮಿದರೆ ಆರೋಗ್ಯದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು. ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ಸಂದರ್ಭದಲ್ಲಿ ವೈದ್ಯರು ಹಾಗೂ ನರ್ಸ್‍ಗಳು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಮದರ್ ಥೆರೇಸಾ, ಫ್ಲಾರೆಂಸ್ ನೈಟಿಂಗೇಲ್ ಇವರುಗಳು ಇಂದಿಗೂ ಪ್ರಾತಃಸ್ಮರಣೀಯರು. ರೋಗಿಗಳಿಗೆ ಹತ್ತಿರದಿಂದ ಸೇವೆ ಮಾಡುವವರೆಂದರೆ ನರ್ಸ್‍ಗಳು. ಬದ್ದತೆ, ಕಠಿಣ ಪರಿಶ್ರಮವಿದ್ದಾಗ ವೃತ್ತಿಯಲ್ಲಿ ಯಶಸ್ಸು ಕಂಡುಕೊಳ್ಳಬಹುದು ಎಂದರು.

ನೂರ ಐವತ್ತಕ್ಕೂ ಹೆಚ್ಚು ವಿದ್ಯಾಸಂಸ್ಥೆ, ಆರು ನೂರಕ್ಕೂ ಅಧಿಕ ನರ್ಸಿಂಗ್ ಕಾಲೇಜು, ನೂರಕ್ಕಿಂತ ಜಾಸ್ತಿ ಪ್ಯಾರಾ ಮಡಿಕಲ್ ಕಾಲೇಜುಗಳು ರಾಜ್ಯದಲ್ಲಿವೆ. ಒಳ್ಳೆ ಹೆಸರು ಗಳಿಸಿ ಸಮಾಜ ಸೇವೆ ಮಾಡಬೇಕೆನ್ನುವುದಾದರೆ ನಿಮಗೆ ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ರಾಘವೇಂದ್ರ ವಿದ್ಯಾಸಂಸ್ಥೆಯ ಏಳಿಗೆಯ ಹಿಂದೆ ದಿವಂಗತ ಸೋಮಶೇಖರ್‍ರವರ ಪರಿಶ್ರಮವಿದೆ. ಈಗ ಅವರ ಕುಟುಂಬದವರಾದ ಶ್ರೀನಿವಾಸ್, ರಾಮಮೂರ್ತಿ, ಭಾಸ್ಕರ್ ಇವರುಗಳು ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆಂದು ಶ್ಲಾಘಿಸಿದರು.

ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ರಾಘವೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ಬಡ ಮಕ್ಕಳು ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ್ ಅನೇಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಒಂದು ಕಾಲದಲ್ಲಿ ಹೊರ ರಾಜ್ಯಗಳಿಂದ ನರ್ಸಿಂಗ್ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳು ಬರುತ್ತಿದ್ದರು. ಈಗ ನಮ್ಮ ಜಿಲ್ಲೆಯವರೆ ಹೆಚ್ಚಿನ ಸಂಖ್ಯೆಯಲ್ಲಿ ನರ್ಸಿಂಗ್ ಶಿಕ್ಷಣ ಪಡೆಯುವಂತಾಗಿದೆ. ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದುದು. ಶ್ರದ್ದೆಯಿಟ್ಟು ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ ಜೀವನವೆಂಬುದು ತೊಗಲು ಗೊಂಬೆಯಿದ್ದಂತೆ. ನಿಲ್ಲುವಂತದ್ದಲ್ಲ. ಸಾಗುತ್ತಿರಬೇಕು. ರೋಗಿಗಳನ್ನು ಉಪಚರಿಸುವಲ್ಲಿ ಡಾಕ್ಟರ್‍ಗಳಿಗಿಂತ ನರ್ಸ್‍ಗಳ ಪಾತ್ರವೆ ಹೆಚ್ಚು. ಜೀವನ ಆದರ್ಶಮಯ, ಕನ್ನಡಿಯಂತಿರಬೇಕು. ವಿದ್ಯೆಯೆ ಮನುಷ್ಯನಿಗೆ ಭೂಷಣ. ಶಿಕ್ಷಣ ಕಲಿತವರು ಮಾತ್ರ ದೇಶವನ್ನು ಸಮರ್ಥವಾಗಿ ಆಳಬಲ್ಲರು. ಜೀವನಕ್ಕೆ ಆಹಾರ ಎಷ್ಟು ಮುಖ್ಯವೋ ಆಧ್ಯಾತ್ಮಿಕತೆಯೂ ಅಷ್ಟೆ ಮುಖ್ಯ. ಬಡ ಮಕ್ಕಳಿಗೆ ಶಿಕ್ಷಣ ನೀಡುವುದು ರಾಘವೇಂದ್ರ ವಿದ್ಯಾಸಂಸ್ಥೆಯ ಉದ್ದೇಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ವೈ.ಟಿ.ತಿಪ್ಪೇಸ್ವಾಮಿ ಮಾತನಾಡುತ್ತ ಜ್ಞಾನ ಮತ್ತು ಆರೋಗ್ಯ ಪ್ರತಿಯೊಬ್ಬರಿಗೂ ಶ್ರೇಷ್ಟವಾದುದು. ಪದವಿಯ ಜೊತೆ ಪರಿಪೂರ್ಣ ಜ್ಞಾನವಿರಬೇಕು. ವೈದ್ಯಕೀಯ ಸೇವೆ ಅಮೂಲ್ಯವಾದುದು. ಸಿಕ್ಕಿರುವ ಅವಕಾಶದಿಂದ ವಂಚಿತರಾಗಬೇಡಿ ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಿರೇಮಠ ಕೊಟ್ಟೂರಿನ ಯೋಗಿ ರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ.ಪದವಿ ಪಡೆದ ಭಾರತದ ಏಕೈಕ ವಿದ್ಯಾರ್ಥಿಯೆಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್. ಓದಿದರೆ ಅಂಬೇಡ್ಕರ್ ರೀತಿಯಲ್ಲಿ ಓದಬೇಕು. ಯಶಸ್ಸು ಸಾಧಿಸುವವರೆಗೂ ಮಲಗುತ್ತಿರಲಿಲ್ಲ. ಓದಿನ ದಾಹವಿತ್ತು.

ರೋಗಿಗಳ ಹೃದಯದಲ್ಲಿ ಬೆಳಕನ್ನು ಮೂಡಿಸುವ ಶಕ್ತಿ ನರ್ಸ್‍ಗಳಲ್ಲಿದೆ ಎಂದು ನರ್ಸಿಂಗ್ ವೃತ್ತಿಯ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಫಾರ್ಮರ್ ಸೆನೆಟ್ ಸಿಂಡಿಕೇಟ್ ಸದಸ್ಯ ವೆಂಕಟಗಿರಿ ಮಾತನಾಡುತ್ತ ರಾಜ್ಯದಲ್ಲಿ 654 ನರ್ಸಿಂಗ್ ಕಾಲೇಜುಗಳಿವೆ. ಇಪ್ಪತ್ತು ವರ್ಷಗಳ ಹಿಂದ ಹೊರ ರಾಜ್ಯದ ವಿದ್ಯಾರ್ಥಿಗಳು ನರ್ಸಿಂಗ್ ಶಿಕ್ಷಣಕ್ಕೆ ಇಲ್ಲಿಗೆ ಬರುತ್ತಿದ್ದರು. ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹಿಂದುಳಿದಿದ್ದೇವೆ.

49 ಸಾವಿರ ನರ್ಸಿಂಗ್ ಸೀಟುಗಳಿವೆ. ಇದರ ಜೊತೆ ಪ್ರಾಧ್ಯಾಪಕರ ಕೊರೆಯೂ ಕಾಡುತ್ತಿದೆ. ಅದೇ ಖಾಸಗಿ ಕಾಲೇಜುಗಳಲ್ಲಿ ಈ ಕೊರತೆಯಿಲ್ಲ. ಜೀವನದ ಕೊನೆಯುಸಿರಿರುವತನಕ ನರ್ಸ್‍ಗಳು ವೈದ್ಯಕೀಯ ಸೇವೆ ಮಾಡುವ ಅವಕಾಶವಿದೆ ಎಂದರು.

ಸಂಸದ ಎಂ.ಗೋವಿಂದ ಕಾರಜೋಳ, ಸಿಂಡಿಕೇಟ್ ಸದಸ್ಯರುಗಳಾದ ಡಾ.ಮಧುಸೂದನ್ ಬಿ.ಕೆ. ಡಾ.ಶ್ರೀನಿವಾಸ್‍ವೇಲು, ಕೃಷ್ಣ ಆಸ್ಪತ್ರೆಯ ಡಾ.ಪ್ರಭಾಕರ್ ಹಂಚಾಟೆ, ಡಾ.ನಾರಾಯಣಮೂರ್ತಿ ಸಿ. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಐ.ಎಂ.ಎ. ಅಧ್ಯಕ್ಷ ಡಾ.ಪಾಲಾಕ್ಷಯ್ಯ, ಪಿ.ವಿ.ಎಸ್.ಆಸ್ಪತ್ರೆಯ ಡಾ.ಶ್ರೀಧರಮೂರ್ತಿ, ರಾಘವೇಂದ್ರ ಫಾರ್ಮಸಿ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಡಾ.ಜಗದೀಶ್ ಎನ್. ನಿವೃತ್ತ ವಲಯ ಅರಣ್ಯಾಧಿಕಾರಿ ಹೆಚ್.ರಾಮಮೂರ್ತಿ, ರಾಘವೇಂದ್ರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶ್ರೀನಿವಾಸ್, ಭಾಸ್ಕರ್, ಪ್ರಾಂಶುಪಾಲರುಗಳಾದ ಡೇವಿಡ್ ಕೊನೇರಿ, ಜಯಲಕ್ಷ್ಮಿ, ಉಪ ಪ್ರಾಂಶುಪಾಲರಾದ ಪ್ರೇಮ, ಕಾರ್ಯನಿರ್ವಾಹಕ ಅಧಿಕಾರಿ ಮೋನಿಕಾ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ತೊಗಲು ಬೊಂಬೆಯಾಟದ ಭೀಮವ್ವ ಬಾಳಪ್ಪ ಶಿಳ್ಳೆಕ್ಯಾತರ ಇವರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...