ಬಳ್ಳಾರಿ; ರೈತರಿಗೆ ಒಳ್ಳೆ ಫಸಲು ಸಿಗುವುದೇ ಕಷ್ಟ. ಸಿಕ್ಕಾಗ ಅದಕ್ಕೆ ಒಳ್ಳೆಯ ಬೆಲೆ ಸಿಗದೆ ಹೋದರೆ ಅವರಿಗಾಗುವ ನೋವು ಅಷ್ಟಿಷ್ಟಲ್ಲ. ಒಂದು ಬೆಳೆಗಾಗಿ ವರ್ಷಾನುಗಟ್ಟಲೇ ಶ್ರಮ ಹಾಕಿರ್ತಾರೆ. ಈಗ ನೋಡಿದ್ರೆ ಭತ್ತದ ಬೆಳೆಗಾರರಿಗೆ ಬೆಲೆಯ ಸಮಸ್ಯೆ ಎದುರಾಗಿದೆ. ಮಳೆ ಇಲ್ಲದೆ, ಬಿಸಿಲಿಗೆ ಒಣಗದಂತೆ ಕಾಪಾಡಿಯೂ ಒಂದೊಳ್ಳೆ ಭತ್ತದ ಬೆಳೆಯನ್ನ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಕ್ಕಿಲ್ಲ.
ಬಳ್ಳಾರಿ ಭಾಗದಲ್ಲಿ ಹೆಚ್ಚಾಗಿ ಬೆಳೆಯುವುದು ಭತ್ತವನ್ನೇ. ಅದರಲ್ಲೂ ಸಿರಗುಪ್ಪ, ಸಂಡೂರು, ಕುರಗೋಡು ಭಾಗದಲ್ಲಿ ಭತ್ತವನ್ನ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಭತ್ತವನ್ನ ಬೆಳೆಯಲಾಗಿದೆ. ಈ ಭಾಗದ ಅಕ್ಕಿಗೆ ಎಲ್ಲಾ ಕಡೆಯಲ್ಲೂ ಡಿಮ್ಯಾಂಡ್ ಇದೆ. ಆದರೆ ಅಲ್ಲಿನ ಮಾರುಕಟ್ಟೆಯಲ್ಲಿಯೇ ಡಿಮ್ಯಾಂಡ್ ಇಲ್ಲದಂತಾಗಿದೆ.
ಮಾರುಕಟ್ಟೆಯಲ್ಲಿ ಕ್ವಿಂಟಲ್ ಭತ್ತಕ್ಕೆ 1,800-1,900 ರೂಪಾಯಿ ತನಕ ಬೆಲೆ ಇದೆ. ಆರಂಭದಲ್ಲಿ ಭತ್ತ ಪ್ರತಿ ಕ್ವಿಂಟಾಲ್ ಚೀಲಕ್ಕೆ ಎರಡು ಸಾವಿರಕ್ಕೂ ಅಧಿಕ ಬೆಲೆ ಇತ್ತು. ಈಗ 300-400 ರೂಪಾಯಿ ಬೆಲೆ ಕುಸಿತ ಕಂಡಿದೆ. ಅಲ್ಲದೆ ಕೆಲವೆಡೆ 1,300 ರೂಪಾಯಿಗೂ ಭತ್ತ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಪ್ರತಿದಿನ ಏರಿಳಿತ ಆಗ್ತಾನೆ ಇದೆ. ಅತ್ತ ಈಗಾಗಲೇ ಬೆಳೆ ಕಟಾವು ಮಾಡಿರುವ ರೈತರು ಬಯಲು ಪ್ರದೇಶ, ರಸ್ತೆ ಬದಿಗಳಲ್ಲಿ ಭತ್ತವನ್ನ ಒಣಗಿಸುತ್ತಾ ಇದ್ದಾರೆ. ಮಳೆಗಾಲ ಬೇರೆ ಶುರುವಾಗಿದೆ. ಭತ್ತ ಒಣಗದೆ ಮಳೆಯಲ್ಲಿ ನೆನೆದರೆ ಏನು ಮಾಡುವುದು ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಎಲ್ಲಾ ಸಮಸ್ಯೆಗಳಿಂದ ಭತ್ತವನ್ನ ಕಾಪಾಡಿಕೊಂಡ ರೈತರಿಗೆ ಈಗ ಬೆಲೆಯ ಸಂಕಷ್ಟ ಶುರುವಾಗಿದೆ.










