ರಸ್ತೆ ಕಾಮಗಾರಿ : ಅಧಿಕಾರಿಗಳ ಮೇಲೆ ಕೆರಳಿದ ನಗರಸಭೆ ಸದಸ್ಯರು

2 Min Read

 

ಹಿರಿಯೂರು: ಶಾಸಕರ ವಿಶೇಷ ಅನುದಾನದ ಕೆಲಸಗಳನ್ನು ನಗರಸಭೆ ಅಧ್ಯಕ್ಷರ, ಸದಸ್ಯರ ಗಮನಕ್ಕೆ ತರದೇ ಕೆಲಸ ಮಾಡಲಾಗುತ್ತಿದೆ ಎಂದು ನಗರಸಭೆಯ ಕೆಲ ಸದಸ್ಯರು ಆರೋಪಿಸಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ನೇತೃತ್ವದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಗರಸಭೆ
ಸದಸ್ಯ ಜಿಎಸ್ ತಿಪ್ಪೇಸ್ವಾಮಿ ಮಾತನಾಡಿ ನಗರದ ಟಿಬಿ ವೃತ್ತದಿಂದ ಗಾಂಧಿ ಸರ್ಕಲ್ ವರೆಗೆ ಹಾಗೂ ಹುಳಿಯಾರು ರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ನಗರಸಭೆ ವ್ಯಾಪ್ತಿಯಲ್ಲಿನ ಕೆಲಸಗಳನ್ನು ಬೇಗ ಪೂರ್ಣಗೊಳಿಸಿ ಎಂದು ಅಧಿಕಾರಿಗಳ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅಗಲೀಕರಣ ವಿಷಯದಲ್ಲಿ ಅಧಿಕಾರಿಗಳು ಸದಸ್ಯರು ಹಾಗೂ ಸಾರ್ವಜನಿಕರ ಪರವಾಗಿ ನಿಲ್ಲದೆ ಕಾಮಗಾರಿ ಕಂಟ್ರಾಕ್ಟರ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರಾಯುಕ್ತ ಎ. ವಾಸೀಂ ಅವರು ಸದಸ್ಯರ ಮಾತಿಗೆ ಉತ್ತರಿಸಿ ಮಳೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ. ಸಂಬಂಧಪಟ್ಟವರಿಗೆ ಸೂಚನೆ ನೀಡಿ ಕಾಮಗಾರಿಗೆ ವೇಗ ನೀಡಲಾಗುವುದು ಎಂದರು.

ವಿಶೇಷ ಸಾಮಾನ್ಯ ಸಭೆಯಲ್ಲಿ 2025-26 ನೇ ಸಾಲಿಗೆ ಎಸ್ ಎಫ್ ಸಿ ಮುಕ್ತ ನಿಧಿ ಯೋಜನೆಯಲ್ಲಿ ಹಂಚಿಕೆಯಾಗಿರುವ ಅನುದಾನಕ್ಕೆ ದಿನಾಂಕ 25-04-2025ರೊಳಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಲು ಸೂಚಿಸಿರುವಂತೆ ನಗರಸಭೆಗೆ ಹಂಚಿಕೆಯಾಗಿರುವ ಅನುದಾನ 17 ಲಕ್ಷಗಳಿಗೆ ಬಂಡವಾಳ ಆಸ್ತಿಗಳ ಅವತರಣೆ ಶೇ 24.10 ಯೋಜನೆಯಲ್ಲಿ ಎಸ್.ಸಿಎಸ್ ಪಿ ಯೋಜನೆಗೆ 27ಲಕ್ಷ ರೂಗಳು ಹಾಗೂ ಟಿಎಸ್ ಪಿ ಯೋಜನೆಗೆ 11 ಲಕ್ಷ ರೂಗಳಿಗೆ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ವಿಷಯ ಮಂಡಿಸಲಾಯಿತು. 2025-2026 ನೇ ಸಾಲಿಗೆ ಎಸ್.ಎಫ್.ಸಿ ಕುಡಿಯುವ ನೀರು ಯೋಜನೆಯಲ್ಲಿ ಹಂಚಿಕೆಯಾಗಿರುವ ಅನುದಾನಕ್ಕೆ 25-04-2025 ರೊಳಗೆ ಹಂಚಿಕೆಯಾಗಿರುವ 9.32‌ ಲಕ್ಪ ಅನುದಾನಕ್ಕೆ ಕ್ರಿಯಾ ಯೋಜನೆ ಸಿದ್ದಪಡಿಸುವುದು. 2025 -26 ನೇ ಸಾಲಿನ 15 ನೇ ಹಣಕಾಸು ಯೋಜನೆಯಲ್ಲಿ ಹಂಚಿಕೆಯಾಗಿರುವ ಅನುದಾನಕ್ಕೆ 25-04-25 ರೊಳಗೆ ಯೋಜನೆ ಸಿದ್ಧಪಡಿಸಿ 351ಲಕ್ಷಗಳಿಗೆ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ವಿಷಯ ಮಂಡಿಸಲಾಯಿತು.
2025 -26 ನೇ ಸಾಲಿನ ಅವಧಿಗೆ ನಗರಸಭೆ ಸಾಮಾನ್ಯ ನಿಧಿಯಲ್ಲಿ ಶೇ 24.10 ರಷ್ಟು ಯೋಜನೆಗಳಿಗೆ 30 ಲಕ್ಷ ರೂಗಳು, ಶೇ 7.25 ರ ಯೋಜನೆಗಳಿಗೆ 9 ಲಕ್ಷ ರೂ ಹಾಗೂ ಶೇ 5 ರ ಯೋಜನೆಗಳಿಗೆ 7 ಲಕ್ಷ ರೂಗಳನ್ನು ಕಾಯ್ದಿರಿಸಿದ್ದು ಕಾಯ್ದಿರಿಸಲಾದ ಮೊತ್ತಕ್ಕೆ ಕ್ರಿಯಾ ಯೋಜನೆಗಳ ಕಾರ್ಯಕ್ರಮಗಳನ್ನು ರೂಪಿಸಲು ಚರ್ಚಿಸಲಾಯಿತು.
ನಗರಸಭೆ ವ್ಯಾಪ್ತಿಯಲ್ಲಿನ ಕಟ್ಟಡ ನೆಲಸಮಗೊಳಿಸಲು ಅನುಮತಿ ನೀಡುವ ಸಂದರ್ಭದಲ್ಲಿ ವಾಸೋಪಯೋಗದ ಕಟ್ಟಡಗಳಿಗೆ 1500,ವಾಣಿಜ್ಯ ಉದ್ದೇಶದ ಕಟ್ಟಡಗಳಿಗೆ 3000 ಶುಲ್ಕ ಪಾವತಿಸಿಕೊಳ್ಳುತ್ತಿದ್ದು ಅಳತೆ ಆಧಾರದ ಮೇಲೆ ಶುಲ್ಕ ನಿಗದಿಪಡಿಸಿ ಪಾವತಿಸಿಕೊಳ್ಳುವ ಬಗೆಗಿನ ವಿಷಯಗಳನ್ನು ಸಭೆಯಲ್ಲಿ ಮಂಡಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್,ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಸದಸ್ಯರಾದ ಈ. ಮಂಜುನಾಥ್, ಗುಂಡೇಶ್ ಕುಮಾರ್, ಎಂಡಿ ಸಣ್ಣಪ್ಪ,ವಿಠ್ಠಲ ಪಾಂಡುರಂಗ, ಜಗದೀಶ್,ಮಹೇಶ್ ಪಲ್ಲವ, ಬಾಲಕೃಷ್ಣ, ವೈಪಿಡಿ ದಾದಾಪೀರ್, ಚಿತ್ರ ಜಿತ್ ಯಾದವ್, ಶಿವರಂಜನಿ,ಶಂಷುನ್ನಿಸಾ,ವಿ ಶಿವಕುಮಾರ್, ಗಿರೀಶ್ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks