Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

---Advertisement---

 

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 08 : ಅನ್ಯಾಯ, ದೌರ್ಜನ್ಯ, ಶೋಷಣೆಗಳನ್ನು ಮಹಿಳೆ ಹಿಂದಿನಿಂದಲೂ ಅನುಭವಿಸಿಕೊಂಡು ಬರುತ್ತಿದ್ದಾಳೆ. ಸಂದರ್ಭ ಬಂದಾಗ ಪ್ರತಿಭಟಿಸಿ ತನಗೆ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ನಿವೃತ್ತ ಪ್ರಾಧ್ಯಾಪಕಿ ಡಾ.ಪಿ.ಯಶೋಧ ಹೇಳಿದರು.

ರಾಷ್ಟ್ರೀಯ ಹೆದ್ದಾರಿ-13 ರ ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ. ಮತ್ತು ಎನ್.ಎಸ್.ಎಸ್. ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಹಿಳಾ ಸಬಲೀಕರಣ ಎಂಬ ವಿಷಯ ಕುರಿತು ಮಾತನಾಡಿದರು.

 

ಕುಟುಂಬದ ನಿರ್ವಹಣೆ ಜವಾಬ್ದಾರಿ ಹೆಣ್ಣಿನ ಮೇಲಿದೆ. ಪ್ರೀತಿ, ಆತ್ಮವಿಶ್ವಾಸ, ಧೈರ್ಯ ತುಂಬುವುದು ಹೆಣ್ಣು. ತೊಟ್ಟಿಲು ತೂಗುವ ಕೈ ಜಗತ್ತನ್ನು ತೂಗುತ್ತದೆ. ಇದಕ್ಕೆ ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದು, ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರುಗಳೆ ಸಾಕ್ಷಿ. ಅಬಲೆ, ಸಬಲೆ ಮಹಿಳೆಯರು ಈಗಲು ಇದ್ದಾರೆ. ಹಕ್ಕು, ಸ್ಥಾನಮಾನಗಳನ್ನು ಕೇಳಿ ಪಡೆಯುವುದಲ್ಲ. ಪ್ರತಿಭಟಿಸಿ ತನಗೆ ಸಿಗಬೇಕಾದುದನ್ನು ಪಡೆಯುವ ಶಕ್ತಿ ಬೆಳೆಸಿಕೊಳ್ಳಬೇಕು. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಹೆಣ್ಣು ದುರ್ಬಲಳಾಗಬಾರದು. ಬುದ್ದಿವಂತಿಕೆ, ತಿಳುವಳಿಕೆಯಲ್ಲಿ ಹೆಣ್ಣು-ಗಂಡಿನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದರು.

 

ಶಿಕ್ಷಣದ ಮೂಲಕ ಮಹಿಳೆ ಸಬಲೀಕರಣವಾಗಬೇಕು. ಸಾಧನೆ ಹೆಣ್ಣನ್ನು ಸಬಲಳನ್ನಾಗಿ ಮಾಡುತ್ತದೆ. ಬಳ್ಳಾರಿ ಸಿದ್ದಮ್ಮ ಸ್ವಾತಂತ್ರ್ಯ ಹೋರಾಟಗಾರ್ತಿ. ಶಿವಪುರ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿದ್ದಳು. ಇಂದಿನ ಕಾಲದಲ್ಲಿ ಮಹಿಳೆ ಪೈಲೆಟ್ ಆಗಿ ಸೇನೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾಳೆ. ಹೆಣ್ಣಿಗೆ ಬಾಲ್ಯ ವಿವಾಹ ಮಾಡುವುದು ಅಕ್ಷಮ್ಯ ಅಪರಾಧ. ಸರ್ಕಾರ ಹೆಣ್ಣಿನ ರಕ್ಷಣೆಗಾಗಿಯೇ ಅನೇಕ ಕಾನೂನುಗಳನ್ನು ತಂದಿದೆ. ಹೆದರುವ ಅಗತ್ಯವಿಲ್ಲ. ಕೌಟುಂಬಿಕ ದೌರ್ಜನ್ಯ, ಮರ್ಯಾದಾ ಹತ್ಯೆ ಇನ್ನು ನಿಂತಿಲ್ಲ. ಭ್ರೂಣಹತ್ಯೆ, ಬಾಲ್ಯವಿವಾಹ ತಡೆಯಬೇಕು. ಆಸ್ತಿಯಲ್ಲಿ ಮಹಿಳೆಗೆ ಸಮಾನ ಅವಕಾಶವಿದೆ. ಓಬವ್ವ, ಕಿತ್ತೂರುರಾಣಿ ಚೆನ್ನಮ್ಮಳಂತ ದಿಟ್ಟ ಮಹಿಳೆಯರು ಇಂದಿನ ಸಮಾಜಕ್ಕೆ ಬೇಕು ಎಂದು ತಿಳಿಸಿದರು.

 

ಸಮಾಜ ಸೇವಕಿ ಕೆ.ಸಿ. ವೀಣ ಮಹಿಳೆ ಮತ್ತು ರಾಜಕೀಯ ಎಂಬ ವಿಷಯ ಕುರಿತು ಮಾತನಾಡುತ್ತ ರಾಜಕೀಯದಲ್ಲಿ ಕೇವಲ ಬೆರಳೆಣಿಕೆಯಷ್ಟು ಹೆಣ್ಣು ಮಕ್ಕಳು ಕಾಣಿಸಿಕೊಳ್ಳುತ್ತಿದ್ದಾರೆ. ಹೆಣ್ಣು ರಾಜಕೀಯ ಪ್ರವೇಶಿಸಿದರೆ ಸಾಕು ಮೊದಲು ಚಾರಿತ್ರ್ಯ ವಧೆಯಾಗುವುದು ಸಹಜ. ಎಲ್ಲವನ್ನು ಮೆಟ್ಟಿ ನಿಂತು ಸಮಾಜದ ಮುಖ್ಯವಾಹಿನಿಗೆ ಬರುವುದು ಕಷ್ಟ. ರಂಗಭೂಮಿ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಉಮಾಶ್ರಿ ಸಾಕಷ್ಟು ಕಷ್ಟ, ಸವಾಲುಗಳನ್ನು ಎದುರಿಸಿ ಮುಂದೆ ಬಂದಿದ್ದಾರೆ. ಹೆಣ್ಣು ಕೇವಲ ಅಡುಗೆ ಮನೆಗಷ್ಠೆ ಸೀಮಿತವಾಗಬಾರದು. ಸಮಾಜದ ದಿಕ್ಸೂಚಿಯಾಗಬೇಕು. ರಾಜಕೀಯಕ್ಕೆ ಹೆಣ್ಣು ಪ್ರವೇಶಿದರೆ ಅಭಿವೃದ್ದಿ ಕಾಣಬಹುದು. ಸ್ವಾತಂತ್ರ್ಯವನ್ನು ಯಾರು ಕೊಡಲ್ಲ. ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

 

ಮಹಿಳೆ ಸ್ವ-ಸಹಾಯ ಸಂಘಗಳಿಂದ ಸಬಲಳಾಗುತ್ತಿದ್ದಾಳೆ. ಸರ್ಕಾರದಿಂದ ಸಾಕಷ್ಟು ಸೌಲತ್ತುಗಳಿವೆ. ನಾಯಕತ್ವ ಗುಣ ಬೆಳೆಸಿಕೊಳ್ಳಿ. ಪ್ರಶ್ನಿಸುವ ಧೈರ್ಯ ಮುಖ್ಯ. ಸೇವೆಯಿಂದ ಆತ್ಮತೃಪ್ತಿ ಸಿಗುತ್ತದೆ ಎಂದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್, ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ ಇವರುಗಳು ವೇದಿಕೆಯಲ್ಲಿದ್ದರು.
ದ್ವಿತೀಯ ಬಿ.ಇ.ಡಿ.ಪ್ರಶಿಕ್ಷಣಾರ್ಥಿ ಚೈತ್ರ ಎಸ್.ಹೆಚ್. ಪ್ರಥಮ ಬಿ.ಇ.ಡಿ.ಪ್ರಶಿಕ್ಷಣಾರ್ಥಿ ಸಂಪದ ವೈ.ಆರ್. ಇವರುಗಳು ಮಹಿಳೆ ಮತ್ತು ಶಿಕ್ಷಣ, ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಎಂಬ ವಿಚಾರ ಕುರಿತು ಮಾತನಾಡಿದರು. ಉಪನ್ಯಾಸಕಿ ಗೀತ ಟಿ.ವೈ. ಪ್ರಾಸ್ತಾವಿಕವಾಗಿ ಮಾತನಾಡಿದರು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...