ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 22 : ಮಹಾರಾಷ್ಟ್ರದಲ್ಲಿ ರಾಜ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನ ನಿರ್ವಾಹಕನಿಗೆ ಮರಾಠಿಗರು ಕನ್ನಡದಲ್ಲಿ ಟಿಕೆಟ್ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮರಾಠ ಬಾಷೆ ಗೊತ್ತಿಲ್ಲವೆಂಬ ಕಾರಣಕ್ಕೆ ಅವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿ ಕನ್ನಡ ಬಾಷೆಗೆ ಮತ್ತು ಕನ್ನಡಿಗರಿಗೆ ಅವಮಾನ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ( ಫೆಬ್ರವರಿ. 21 ರಂದು ) ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬುರುಜನರೊಪ್ಪದ ಬಳಿ ರಾಜಸ್ಥಾನ ಡಾಬಾದ ಬಳಿ (ಎನ್ ಹೆಚ್ 48) ಬೆಂಗಳೂರುನಿಂದ ಮುಂಬೈ ಗೆ ಹೋಗುತ್ತಿದ್ದ ಮಹರಾಷ್ಟ್ರದ ಸಾರಿಗೆ ಬಸ್ ನ್ನು ತಡೆದು ಬಸ್‌ಗೆ ಕಪ್ಪು ಬಣ್ಣವನ್ನು ಬಳಿದು, ‘ಜೈ ಕರ್ನಾಟಕ, ಜೈ ಕನ್ನಡ, ಬೆಳಗಾವಿ ನಮ್ಮದು, ಮರಾಠಿಗರು ಪುಂಡಾಟಿಕೆ ನಿಲ್ಲಿಸಬೇಕು’ ಎಂದು ಬಸ್ ಮೇಲೆ ಬರೆದಿದ್ದರು. ಬಸ್ ಚಾಲಕ ಹರಿ ಜಾದವ್ ಮುಖಕ್ಕೂ ಮಸಿ ಬಳಿದಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಹರಿ ಜಾದವ್ ಐಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನನ್ವಯ ಶನಿವಾರ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರಾದ ಲಕ್ಷ್ಮೀಕಾಂತ, ತಿಪ್ಪೇಸ್ವಾಮಿ, ಮಣಿಕಂಠ, ರಾಮು, ಇಂದ್ರ, ನಂದಕುಮಾರ್, ಮಂಜುನಾಥ್ ಮತ್ತು ಮಹಮ್ಮದ್ ಅವರನ್ನು ಐಮಂಗಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.






