ಸುದ್ದಿಒನ್ |
ಪ್ರಧಾನಿ ಮೋದಿ ಮುಂದಿನ ತಿಂಗಳು ಅಮೆರಿಕಕ್ಕೆ ತೆರಳುವ ಸಾಧ್ಯತೆ ಇದೆ. ಈ ವಿಷಯವನ್ನು ಸ್ವತಃ ಅಮೆರಿಕ ಅಧ್ಯಕ್ಷ ಟ್ರಂಪ್ ಬಹಿರಂಗಪಡಿಸಿದ್ದಾರೆ. ಟ್ರಂಪ್‌ಗೆ ಮೋದಿ ದೂರವಾಣಿ ಕರೆ ಮಾಡಿದ ನಂತರ, ಅಮೆರಿಕ ಅಧ್ಯಕ್ಷರು ಇದನ್ನು ಬಹಿರಂಗಪಡಿಸಿದ್ದಾರೆ. ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಉಭಯ ದೇಶಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದರು. ಉಭಯ ದೇಶಗಳ ನಡುವೆ ಪರಸ್ಪರ ಲಾಭದಾಯಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ಭಾರತ ಬದ್ಧವಾಗಿದೆ ಎಂದು ಮೋದಿ ಟ್ರಂಪ್ ಅವರಿಗೆ ತಿಳಿಸಿದರು. ಭಾರತ ಮತ್ತು ಅಮೆರಿಕದ ಜನರ ಕಲ್ಯಾಣಕ್ಕಾಗಿ ಮತ್ತು ವಿಶ್ವಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮೋದಿ ಟ್ರಂಪ್ ಅವರಿಗೆ ವಿವರಿಸಿದರು.
ಮೋದಿ ಮತ್ತು ಟ್ರಂಪ್ ನಡುವಿನ ಮಾತುಕತೆ ಕುರಿತು ಶ್ವೇತಭವನ ಅಧಿಕೃತ ಹೇಳಿಕೆ ನೀಡಿದೆ. ಈ ಫೋನ್ ಕರೆಯಲ್ಲಿ ಮೋದಿಗೆ ಅಮೆರಿಕ ಭೇಟಿಗೆ ಆಹ್ವಾನ ನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಅಲ್ಲದೆ, ಟ್ರಂಪ್ ಮತ್ತು ಮೋದಿ ನಡುವೆ ಉಭಯ ದೇಶಗಳ ನಡುವಿನ ಪರಸ್ಪರ ಸಹಕಾರದ ಅಭಿವೃದ್ಧಿ ಕುರಿತು ಚರ್ಚೆ ನಡೆದಿದೆ ಎಂದು ಅಮೆರಿಕ ಅಧ್ಯಕ್ಷರ ಕಚೇರಿ ಈ ಹೇಳಿಕೆಯಲ್ಲಿ ವಿವರಿಸಿದೆ. ಜತೆಗೆ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳ ಖರೀದಿಯನ್ನು ಹೆಚ್ಚಿಸುವಂತೆ ಭಾರತಕ್ಕೆ ಮನವಿ ಮಾಡಿರುವುದಾಗಿ ಶ್ವೇತಭವನ ತಿಳಿಸಿದೆ. ಪಾರದರ್ಶಕ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವಂತೆ ಟ್ರಂಪ್ ಮೋದಿ ಅವರನ್ನು ಕೇಳಿದರು. ಮತ್ತೊಂದೆಡೆ, ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಬಗ್ಗೆ ಚರ್ಚೆ ನಡೆಯಿತು. ಈ ಫೋನ್ ಕರೆಯಲ್ಲಿ ಮೋದಿ ಮತ್ತು ಟ್ರಂಪ್ ಈ ವರ್ಷ ಮೊದಲ ಬಾರಿಗೆ ಭಾರತದಲ್ಲಿ ಕ್ವಾಡ್ ಶೃಂಗಸಭೆಯನ್ನು ನಡೆಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.