ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಗೆ ಪಾರ್ಶ್ವ ವಾಯು ಬಂದಿದೆ : ವಿಜಯೇಂದ್ರ ವಾಗ್ದಾಳಿ..!

ಬೆಂಗಳೂರು: ಅತ್ತ ಸಾರಿಗೆ ಇಲಾಖೆ ನೌಕರರು ನಮ್ಮ ಬೇಡಿಕೆ ಈಡೇರಿಸದೆ ಹೋದರೆ ಮುಷ್ಕರ ಕೂರ್ತೀವಿ ಎಂದು ರೊಚ್ಚಿಗೆದ್ದಿದ್ದಾರೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆಯ್ದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಯು ಪಾರ್ಶ್ವವಾಯುವಿಗೆ ತುತ್ತಾಗಿದೆ. ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿವೈ ವಿಜಯೇಂದ್ರ ಅವರು ಮಾತನಾಡಿ, ಒಂದು ಕಾಲದಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿದ್ದ ಕರ್ನಾಟಕದ ಸಾರಿಗೆ ಇಲಾಖೆಯನ್ನು ಆರ್ಥಿಕವಾಗಿ ಕುಗ್ಗಿಸಿದ ಕೀರ್ತಿಗೆ ಕಾಂಗ್ರೆಸ್ ಸರ್ಕಾರ ಪಾತ್ರವಾಗಿದೆ. ಇಲಾಖೆಯ ಅಧೀನದಲ್ಲಿರುವ ನಾಲ್ಕು ನಿಗಮಗಳ ಬಾಕಿ ಮೊತ್ತ 6,468 ಕೋಟಿ ರೂಪಾಯಿಗೂ ಹೆಚ್ಚಿದ್ದು ತೀವ್ರ ಆರ್ಥಿಕ ನಷ್ಟದಲ್ಲಿ ಮುಳುಗಿದೆ. ಕಳೆದ ವೇತನ ಪರಿಷ್ಕರಣೆಯಾಗಿ 38 ತಿಂಗಳು ಕಳೆದಿದ್ದರೂ, ಬಾಕಿ ಪಾವತಿ ಹಾಗೆಯೇ ಉಳಿದಿದೆ. ಶಕ್ತಿ ಯೋಜನೆಯೂ ಈ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಿದೆ. ಇಲಾಖೆಯನ್ನು ದಿವಾಳಿಯ ಅಂಚಿಗೆ ದೂಡಿದೆ. ಸಾರಿಗೆ ನಿಗಮಗಳ ಆರ್ಥಕ ಸಂಕಷ್ಟವನ್ನು ಪರಿಹರಿಸಲು ಮತ್ತು ನೌಕರರ ಬಾಕಿ ಮೊತ್ತ ಪಾವತಿಯನ್ನು ಇತ್ಯರ್ಥಪಡಿಸಲು ಸರ್ಕಾರ ವಿಫಲವಾದರೆ ವ್ಯಾಪಕ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ.

ಈ ಸರ್ಕಾರದ ನಾಚಿಕೆಗೇಡಿನ ರೀತಿಯನ್ನು ಖಂಡಿಸಿ ಜನರು ಬೀದಿಗಿಳಿಯುವ ದಿನ ದೂರವಿಲ್ಲ ಎಂದು ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ. ಇನ್ನು ನಾಲ್ಕು ಸಾರಿಗೆ ನಿಗಮಗಳ ನೌಕರರು ಮೂಲ ವೇತನದಲ್ಲಿ ಶೇಕಡ 25 ರಷ್ಟು ಹೆಚ್ಚಳ ಹಾಗೂ ಬಾಕಿ ಪಾವತಿಗೆ ಆಗ್ರಹಿಸಿ ಡಿಸೆಂಬರ್ 31ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!